ಕೊನೆಗೂ ನನಸಾಗುತ್ತಿದೆ ಎಡಿಡಿ ಇಂಜಿನಿಯರಿಂಗ್ ಕಂಪೆನಿಯ ಕನಸು..!
ನೆಲಮಂಗಲದಲ್ಲಿ ಎಡಿಡಿ ಕಂಪೆನಿಯಿಂದ ಹೈ ಎಂಡ್ ಕಟ್ಟಿಂಗ್ ಟೂಲ್ಸ್ ಸಲ್ಯೂಶನ್ಸ್ ಘಟಕ ಸ್ಥಾಪನೆ
ಎಡಿಡಿ ಕಂಪೆನಿಯಿಂದ ಯುದ್ಧ ವಿಮಾನಗಳ ಬಿಡಿ ಭಾಗ ತಯಾರಿಸುವ ಘಟಕ
ಎರಡು ವರ್ಷಗಳ ನಂತರ ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ನ ಕನಸು ಸಾಕಾರವಾಗುವ ಸಮಯ ಹತ್ತಿರ ಬಂದಿದೆ. ತುಮಕೂರಿನಲ್ಲಿರುವ ಮಶಿನ್ ಟೂಲ್ಸ್ ಪಾರ್ಕ್ ನಲ್ಲಿ ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಬಹುನಿರೀಕ್ಷಿತ ಯದ್ಧ ವಿಮಾನಗಳ ಬಿಡಿ ಭಾಗಗಳನ್ನು ತಯಾರಿಸಲು ಬಳಸಬಹುದಾದ ಹೈಎಂಡ್ ಕಟ್ಟಿಂಗ್ ಟೂಲ್ಸ್ ಸಲೂಶನ್ಸ್ ಘಟಕ ಸ್ಥಾಪನೆ ಮಾಡಲು ಎಲ್ಲಾ ಪೂರ್ವಸಿದ್ಧತೆ ಮಾಡಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ಈ ಘಟಕ ಸ್ಥಾಪನೆಗಾಗಿ ತುಂಡು ಭೂಮಿ ನೀಡುವಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಭೂಮಿ ಮಂಜೂರು ಮಾಡಿಸಿಕೊಳ್ಳಲು ಸಂಸ್ಥೆಗೆ ಸಾಧ್ಯವಾಗಿರಲಿಲ್ಲ. ಆದರೆ, ರಕ್ಷಣಾ ಇಲಾಖೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಹಲವಾರು ಕ್ರಮಗಳ ಹಿನ್ನೆಲೆಯಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣದಡಿ ಎಡಿಡಿ ದೇಶೀಯವಾಗಿ ಉತ್ಪನ್ನಗಳನ್ನು ತಯಾರು ಮಾಡಲಿದೆ ಎಂಬ ಅಂಶವನ್ನು ಗಮನಿಸಿರುವ ಕರ್ನಾಟಕ ಉದ್ಯೋಗ ಮಿತ್ರ ಮತ್ತು ಕರ್ನಾಟಕ ಕೈಗಾರಿಕೆಗಳ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಇಲಾಖೆಗಳು ಜಂಟಿಯಾಗಿ ಎಡಿಡಿಗೆ ಘಟಕ ಸ್ಥಾಪನೆ ಮಾಡಲು ನೆರವಾಗುತ್ತಿವೆ. ಈ ಮೂಲಕ ಎರಡೂ ಸಂಸ್ಥೆಗಳ ಅಧಿಕಾರಿಗಳು ರಾಜ್ಯದಲ್ಲಿ ರಕ್ಷಣಾ ಘಟಕವನ್ನು ಸ್ಥಾಪನೆ ಮಾಡಲು ಎಡಿಡಿಗೆ ಬೆಂಬಲವಾಗಿ ನಿಂತಿರುವುದು ಸ್ವಾಗತಾರ್ಹವಾದ ಮತ್ತು ಶ್ಲಾಘನೀಯ ಬೆಳವಣಿಗೆಯಾಗಿದೆ. ನೆಲಮಂಗಲ ಕೈಗಾರಿಕಾ ಎಸ್ಟೇಟ್ ನಲ್ಲಿ ಘಟಕ ಸ್ಥಾಪನೆ ಮಾಡಲು ತುಂಡು ಭೂಮಿ ನೀಡುವಂತೆ ಕಂಪನಿಯು ಕಳೆದ ಎರಡು ವರ್ಷಗಳಿಂದ ಅರ್ಜಿ ಸಲ್ಲಿಸುತ್ತಾ ಬಂದಿತ್ತಾದರೂ ಕೆಲವು ಅಧಿಕಾರಶಾಹಿ ವರ್ಗದವರು ಇದರ ಬಗ್ಗೆ ಆಸಕ್ತಿಯನ್ನೇ ತೋರಲಿಲ್ಲ. ಆದರೆ, ಈಗ ಕರ್ನಾಟಕ ಉದ್ಯೋಗ ಮಿತ್ರ ಮತ್ತು ಕೆಐಎಡಿಬಿ ಸಂಸ್ಥೆಗಳು ತುಮಕೂರು ಮಶಿನ್ ಟೂಲ್ ಪಾರ್ಕ್ ನಲ್ಲಿ ಉದ್ಯಮ ಸ್ಥಾಪನೆಗೆಂದು ½ ಎಕರೆಯಷ್ಟು ವಿಸ್ತೀರ್ಣದ ಪ್ಲಾಟ್ ಅನ್ನು ಎಡಿಡಿಗೆ ಮಂಜೂರು ಮಾಡಲು ನಿರ್ಧರಿಸಿವೆ.
ಈ ಬಗ್ಗೆ ಮಾತನಾಡಿದ ಎಇಸಿಪಿಎಲ್ ನಿರ್ದೇಶಕ ಎಲ್.ಗಿರೀಶ್ ಅವರು, “ಬೆಂಗಳೂರಿನಲ್ಲಿ ವಿನ್ಯಾಸ ಕೇಂದ್ರವನ್ನು ಸ್ಥಾಪನೆ ಮಾಡಿರುವುದು ಮತ್ತು ಯದ್ಧ ವಿಮಾನಗಳ ಬಿಡಿ ಭಾಗಗಳನ್ನು ತಯಾರಿಸಲು ಬಳಸಬಹುದಾದ ಹೈಎಂಡ್ ಕಟ್ಟಿಂಗ್ ಟೂಲ್ಸ್ ಸಲೂಶನ್ಸ್ ಘಟಕ ಸ್ಥಾಪನೆ ಮಾಡಲು ನಾನು ಆಸಕ್ತಿ ವಹಿಸಿರುವುದನ್ನು ಗಮನಿಸಿರುವ ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕರು ಇದೊಂದು ರಾಷ್ಟ್ರೀಯ ಹಿತಾಸಕ್ತಿಯನ್ನು ಹೊಂದಿರುವ ಯೋಜನೆಯಾಗಿದ್ದು, ಇದನ್ನು ಸಮಿತಿ ಮುಂದೆ ಪ್ರಸ್ತುತಪಡಿಸಿ ಭೂಮಿ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ, ಈ ವಿಚಾರದಲ್ಲಿ ಕೆಐಎಡಿಬಿಯ ಮುಖ್ಯ ಕಾರ್ಯಕಾರಿ ಅಧಿಕಾರಿ(ಸಿಇಒ) ಮತ್ತು ಸದಸ್ಯ ಕಾರ್ಯದರ್ಶಿಗಳೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತುಮಕೂರು ಮಶಿನ್ ಟೂಲ್ ಪಾರ್ಕ್ ನಲ್ಲಿ ಭೂಮಿಯನ್ನು ಮಂಜೂರು ಮಾಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಆದೇಶವನ್ನು ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ’’ ಎಂದು ತಿಳಿಸಿದರು.
ಇದೇ ವೇಳೆ, ತುಮಕೂರಿನಲ್ಲಿ ಭೂಮಿಯನ್ನು ನೀಡಲು ಕೆಐಎಡಿಬಿ ಅಧಿಕಾರ ವರ್ಗವೂ ಸಕಾರಾತ್ಮಕವಾಗಿದೆ ಎಂದು ತಿಳಿಸಿರುವ ಗಿರೀಶ್, “ಘಟಕ ಸ್ಥಾಪನೆ ವಿಚಾರದಲ್ಲಿ ಆಗಿರುವ ವಿಳಂಬವನ್ನು ಸರ್ಕಾರ ನಮಗೆ ಆದಷ್ಟೂ ಶೀಘ್ರದಲ್ಲಿ ಪರ್ಯಾಯವಾಗಿ ಭೂಮಿಯನ್ನು ಮಂಜೂರು ಮಾಡಲಿದೆ ಎಂಬ ವಿಶ್ವಾಸವಿದೆ’’ ಎಂದಿದ್ದಾರೆ.
ಆತ್ಮ ನಿರ್ಭರ್ ಭಾರತ್ ನಿರ್ಮಾಣದ ಪರಿಕಲ್ಪನೆಯನ್ನು ಅನುಸರಿಸಿ `ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ಎಡಿಡಿ ಎಂಜಿನಿಯರಿಂಗ್ ತಯಾರಿಕಾ ಘಟಕವನ್ನು ಸ್ಥಾಪನೆ ಮಾಡಲು ಉದ್ದೇಶಿಸಿದೆ.
“ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗುವ ರಕ್ಷಣಾ ಕ್ಷೇತ್ರದ ಕನಸನ್ನು ಸಾಕಾರಗೊಳಿಸುವ ಪ್ರಕ್ರಿಯೆಯಲ್ಲಿ ನಾವೂ ಭಾಗಿಯಾಗಬೇಕೆಂದು ಬಯಸಿದ್ದೇವೆ. ಈ ನಿಟ್ಟಿನಲ್ಲಿ ನಾವು ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದು, ದೇಶಕ್ಕೆ ಅಡ್ವಾನ್ಸ್ಡ್ ಇಂಟಗ್ರೇಶನ್ ಟೆಕ್ನಾಲಾಜಿ(ಎಐಟಿ)ಯಂತಹ ತಂತ್ರಜ್ಞಾನವನ್ನು ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ವಿಶ್ವದ ಅತ್ಯುತ್ತಮ ಎಫ್-35 ಯುದ್ಧ ವಿಮಾನಗಳನ್ನು ತಯಾರಿಸುವ ಲಾಕ್ಹೀಡ್ ಮಾರ್ಟಿನ್ ಜೊತೆಗೆ ಅಮೆರಿಕಾ ಮೂಲದ ಅಡ್ವಾನ್ಸ್ಡ್ ಇಂಟಗ್ರೇಶನ್ ಟೆಕ್ನಾಲಾಜಿ(ಎಐಟಿ) ಕಾರ್ಯನಿರ್ವಹಿಸುತ್ತಿದೆ’’ ಎಂದು ಅವರು ವಿವರಿಸಿದರು.
ಎಇಸಿಪಿಎಲ್ ಬೆಂಗಳೂರಿನಲ್ಲಿ 2015 ರಲ್ಲಿ ತನ್ನ ಡಿಸೈನ್ ಸೆಂಟರ್ ಅನ್ನು ಆರಂಭಿಸಿತ್ತು. ಪ್ರಮುಖವಾಗಿ ಕಟ್ಟಿಂಗ್ ಟೂಲ್ಸ್ ಇಂಡಸ್ಟ್ರಿಯಲ್ಲಿ ಮೂರು ದಶಕಗಳಿಗೂ ಕಾಲ ಸೇವೆ ಸಲ್ಲಿಸಿ ನಿಷ್ಣಾತರಾಗಿರುವ ಮತ್ತು ಹರ್ಟೆಲ್ ಜಿಎಂಬಿಎಚ್ ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ನೊರ್ಬರ್ಟ್ ಕ್ರೆಲ್ಲರ್, ನಾಸಾದಲ್ಲಿ ಕೆಲಸ ಮಾಡಿರುವ ವೈಮಾಂತರಿಕ್ಷ ವಿಷಯದಲ್ಲಿ ಡಾಕ್ಟರೇಟ್ ಪಡೆದಿರುವ ಡಾ.ವರ್ನರ್ ಗ್ರೈಕ್ಸಾ, ಮೆಟಲ್ ಕಟಿಂಗ್ ಸಲೂಶನ್ಸ್ ನಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ ಅನುಭವವಿರುವ ಮತ್ತು ರಷ್ಯಾದಲ್ಲಿ ಎಡಿಡಿ ಎಂಜಿನಿಯರಿಂಗ್ ಅನ್ನು ಮುನ್ನಡೆಸುತ್ತಿರುವ ಅಲೆಕ್ಸಾಂಡರ್ ಲೊಕ್ಟೆವ್ ಮತ್ತು ವಿಶ್ವದ ಹೆಸರಾಂತ ಗೇರ್ ತಯಾರಿಕೆಯ ನಿಪುಣರಾಗಿರುವ ಡಾ.ಉಡೋ ವೈಗೆಲ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಎಲ್.ಗಿರೀಶ್ ಅವರು ಎಇಸಿಪಿಎಲ್ ನ ವ್ಯವಸ್ಥಾಪಕ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಉತ್ಪಾದನಾ ಘಟಕವನ್ನು ಆರಂಭಿಸಲು ಮುನ್ನಡಿ ಇಟ್ಟಿದ್ದಾರೆ.
ತೇಜಸ್ ಎಂಕೆ1 ಮತ್ತು ತೇಜಸ್ ಎಂಕೆ2ನಂತಹ ಯುದ್ಧ ವಿಮಾನಗಳಿಗೆ ನಿರ್ಣಾಯಕವಾದ ಬಿಡಿಭಾಗಗಳನ್ನು ತಯಾರಿಸಲು ಅಗತ್ಯವಾಗಿರುವ ಕಟ್ಟಿಂಗ್ ಟೂಲ್ಸ್ ತಯಾರಿಸುವುದು ಮತ್ತು ಪೂರೈಕೆ ಮಾಡುವ ಘಟಕವನ್ನು ತಯಾರಿಸಲು ಎಡಿಡಿ ಎಂಜಿನಿಯರಿಂಗ್ ಅರ್ಜಿ ಸಲ್ಲಿಸಿತ್ತು. ಈ ವಿಚಾರದಲ್ಲಿ ಇಡೀ ರಕ್ಷಣಾ ಸಚಿವಾಲಯವೇ ಗಿರೀಶ್ ಅವರ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದ್ದಾದರೂ, ಭೂಮಿ ಮಂಜೂರು ಮಾಡುವ ವಿಚಾರದಲ್ಲಿ ಮಾತ್ರ ಕೆಎಸ್ಎಸ್ಐಡಿಸಿ ಮೌನಕ್ಕೆ ಶರಣಾಗಿ, ಭೂಮಿ ಮಂಜೂರು ಮಾಡುವ ಗೊಡವೆಗೇ ಹೋಗಲಿಲ್ಲ.
ಆದರೆ, ಈಗ ಕರ್ನಾಟಕ ಉದ್ಯೋಗ ಮಿತ್ರ ಮತ್ತು ಕೆಐಎಡಿಬಿ ಅಧಿಕಾರಿಗಳು ಇದೊಂದು ರಾಷ್ಟ್ರೀಯ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ್ದು ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿರುವ ಯೋಜನೆ ಎಂಬುದನ್ನು ಮನಗಂಡು ಎಡಿಡಿ ಎಂಜಿನಿಯರಿಂಗ್ ಗೆ ತುಮಕೂರು ಮಶಿನ್ ಟೂಲ್ ಪಾರ್ಕ್ ನಲ್ಲಿ ಭೂಮಿಯನ್ನು ಮಂಜೂರು ಮಾಡಲು ಕ್ರಮ ತೆಗೆದುಕೊಳ್ಳುತ್ತಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ.