ದಕ್ಷಿಣ ಅಫ್ಘಾನಿಸ್ತಾನದಲ್ಲಿ 109 ತಾಲೀಬಾನ್ ಉಗ್ರರ ಹತ್ಯೆ
ಅಪ್ಘಾನಿಸ್ತಾನ : ಸಂಘರ್ಷ ಪೀಡಿತ ದಕ್ಷಿಣ ಅಫ್ಘಾನಿಸ್ತಾನದ ಪ್ರಾಂತ್ಯದಲ್ಲಿ ಅಫ್ಘಾನಿಸ್ತಾನದ ರಕ್ಷಣಾ ಹಾಗೂ ಭದ್ರತಾ ಪಡೆಗಳು ನಡೆಸಿದ ದಾಳಿಗೆ 109 ಮಂದಿ ತಾಲೀಬಾನ್ ಉಗ್ರರು ಸಾವನ್ನಪ್ಪಿದ್ದು 25 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕಂದಹಾರ್ ಪ್ರಾಂತ್ಯದಲ್ಲಿ 70 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದ್ದರೆ 8 ಮಂದಿ ಇತರರು ಗಾಯಗೊಂಡಿದ್ದಾರೆ. ಅಫ್ಘಾನ್ ವಾಯು ಪಡೆ ಸಹಕಾರದಲ್ಲಿ ಎಎನ್ ಡಿಎಸ್ ಎಫ್ ಈ ಕಾರ್ಯಾಚರಣೆ ನಡೆಸಿದೆ. ಕಂದಹಾರ್ ನಗರದ ಪೊಲೀಸ್ ಜಿಲ್ಲೆ 7 ಹಾಗೂ ನೆರೆಯ ಸಬ್ ಅರ್ಬನ್ ದಾಂಡ್ ಜಿಲ್ಲೆಯಲ್ಲಿ ಸೇನೆಯ ಕಾರ್ಯಾಚರಣೆ ಬಗ್ಗೆ ಸೇನೆಯ 205 ಅಟ್ಟಾಲ್ ಕಾರ್ಪ್ಸ್ ಹೇಳಿಕೆ ಬಿಡುಗಡೆ ಮಾಡಿದೆ.
ಈ ಹಿಂದೆ ಶುಕ್ರವಾರದಂದು ತಾಲೀಬಾನ್ ಎಎನ್ ಡಿಎಸ್ ಎಫ್ ನ ಸ್ಥಾನಗಳ ಮೇಲೆ ದಾಳಿ ನಡೆಸಿ ಕಂದಹಾರ್ ನಗರಕ್ಕೆ ನುಸುಳಲು ಯತ್ನಿಸಿತ್ತು. ಈ ವೇಳೆ ಹೆಲ್ಮಾಂಡ್ ಪ್ರಾಂತ್ಯದಲ್ಲಿ 39 ತಾಲೀಬಾನ್ ಉಗ್ರರನ್ನು ಹತ್ಯೆ ಮಾಡಲಾಗಿತ್ತು, ಕಾರ್ಯಾಚರಣೆಯಲ್ಲಿ 17 ಮಂದಿ ಗಾಯಗೊಂಡಿದ್ದರು. ಸ್ಥಳೀಯವಾಗಿ ತಾಲೀಬಾನ್ ಗೆ ಪ್ರಮುಖವಾಗಿದ್ದ ಇಬ್ಬರು ನಾಯಕರನ್ನು ಹತ್ಯೆ ಮಾಡಲಾಗಿದೆ..