ಅಗೋಚರ ಜಾಲ ಮತ್ತು ಸಾಯಿ ಸ್ಮೃತಿ ಪುಸ್ತಕಗಳ ಕುರಿತು ಒಂದಷ್ಟು ಮಾತುಗಳು:

1 min read

ಅಗೋಚರ ಜಾಲ ಮತ್ತು ಸಾಯಿ ಸ್ಮೃತಿ ಪುಸ್ತಕಗಳ ಕುರಿತು ಒಂದಷ್ಟು ಮಾತುಗಳು:

ನಾವಿಂದು ಬದುಕುತ್ತಿರುವ ಈ ವರ್ಚುಯೆಲ್‌ ಪ್ರಪಂಚ ನಮಗೆ ಒಂದು ರೀತಿಯ ಪರ್ಯಾಯ ವಿಶ್ವದ ಅನುಭೂತಿ ಮೂಡಿಸುವ ಅಗೋಚರ ಜಗತ್ತು. ಇಲ್ಲಿ ದೈಹಿಕವಾಗಿ ಯಾವುದೆ ವ್ಯಕ್ತಿಗಳಿಗೆ, ವಸ್ತುಗಳಿಗೆ ಮತ್ತು ವಿಚಾರಗಳಿಗೆ ಅಸ್ಥಿತ್ವವೇ ಇಲ್ಲ. ಇದೊಂದು ಬಗೆಯ ಮಾಯಾಲೋಕ; ಇದನ್ನೇ ಡಿಜಿಟಲ್‌ ಎರಾ ಎನ್ನುತ್ತೇವೆ. ಕೊಂಚ ಸಿಂಹಾವಲೋಕನ ಮಾಡಿಬರೋಣ. ಮೊದಲು ಕೃಷಿ ಕ್ರಾಂತಿಯಾಯಿತು, ನಂತರ ಕೈಗಾರಿಕಾ ಕ್ರಾಂತಿ, ಇದರ ಬೆನ್ನಲ್ಲೇ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ರಾಂತಿ ಘಟಿಸಿತಲ್ಲ, ಅದರ ಮುಂದಿನ ವರ್ಷನ್‌ ೨.೦ ಈ ಡಿಜಿಟಲ್‌ ಕ್ರಾಂತಿ. ಈ ಕ್ರಾಂತಿ ನಮಗೆ ಗರ್ವ ಪಟ್ಟುಕೊಳ್ಳಲು ಪುರುಸೊತ್ತೇ ಕೊಡದಂತೆ ಅಪಾಯಗಳ ಪ್ಯಾಕೇಜ್‌ ಹುದುಗಿಸಿಟ್ಟುಕೊಂಡಿದೆ. ಈ ಪುಸ್ತಕ ಅಗೋಚರ ಸೈಬರ್‌ ಸಮರಕ್ಕೆ ಸಂಬಂಧಿಸಿದ್ದು.

ನಮಗೆ ಗೊತ್ತಿದ್ದಿದ್ದು ಒಂದು ವೈರಸ್‌ ಮತ್ತು ಅದಕ್ಕೊಂದು ಆಂಟಿವೈರಸ್‌ ಅಷ್ಟೇ ತಾನೆ. ಊಹೂಂ! ವಿಷಯ ಅಷ್ಟೇ ಅಲ್ಲ ಸೈಬರ್‌ ದಾಳಿಗಳ ಆಳ ನಮ್ಮ ಕಲ್ಪನೆಗೆ ನಿಲುಕದ್ದು. ಮಾಲ್ವೇರ್‌, ಸ್ಪೈವೇರ್‌, ಸ್ಪೂಫಿಂಗ್‌, ಸ್ನಿಫಿಂಗ್‌, ರ್ಯಾನ್‌ಸಮ್‌ವೇರ್‌, ಎಥಿಕಲ್‌ ಹ್ಯಾಕಿಂಗ್‌, ಸೋಶಿಯಲ್‌ ಎಂಜಿನಿಯರಿಂಗ್‌, ಡೀಪ್‌ ವೆಬ್‌ ಮುಂತಾದ ಹಲವು ತರಹದ ಅಪಾಯಗಳ ಕುರಿತಾಗಿ ಸಮಗ್ರ ಬೇಸಿಕ್‌ ಮಾಹಿತಿಗಳಿವೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ ಅಥವಾ ಕೃತಕ ಬೌದ್ಧಿಕತೆ, ಮೆಷಿನ್‌ ಲರ್ನಿಂಗ್‌, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, ಕ್ಲೌಡ್‌ ಟೆಕ್ನಾಲಜಿ, ಗ್ಲೋಬಲ್‌ ನೆಟ್‌ವರ್ಕ್‌, ಕ್ವಾಂಟಮ್‌ ಕಂಪ್ಯೂಟಿಂಗ್‌, ಜೆನೆಟಿಕ್‌ ಎಂಜಿನಿಯರಿಂಗ್‌, ಡಾರ್ಕ್‌ ನೆಟ್‌ ಎಂಬುವ ಅದೃಶ್ಯ ಪ್ರಪಂಚ, ಅಲ್ಲಿ ನಡೆಯುವ ದೈನಂದಿನ ವಂಚಕರ ಮಾರಾಟ ಸಂತೆ, ಹೀಗೆ ಪಟ್ಟಿ ಮಾಡುತ್ತಾ ಹೋದರೆ ನಾವು ಅರಿಯದಿರುವ ನೂರಾರು ವಿಸ್ಮಯಕಾರಿ ಸಂಗತಿಗಳ ಮೇಲೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಇದು ಮೊದಲ ಸರಣಿಯಷ್ಟೆ. ಇದರ ಮುಂದಿನ ವರ್ಷನ್‌ ಜ್ಯೋತ್ಸ್ನಾ ಅವರ ಲೇಖನಿಯಲ್ಲಿ ಅಕ್ಷರಕ್ಕಿಳಿಯುತ್ತಿದೆ. ಅತ್ಯಂತ ಸರಳವಾಗಿ ನಿರೂಪಿಸಲ್ಪಟ್ಟ ಈ ಪುಸ್ತಕದ ಕನ್ನಡ ಭಾವಾನುವಾದವಿದು.

ನಾವಿಂದು ಡಿಜಿಟಲ್‌ ವಿಶ್ವದ ಗುಲಾಮರಾಗಿ ಬದುಕುತ್ತಿದ್ದೇವೆ, ಗ್ಯಾಡ್ಜೆಟ್‌, ಡಿವೈಸ್‌ಗಳ ಮೇಲೆ ನಮ್ಮ ಬದುಕನ್ನು ಅವಲಂಬಿಸಿಕೊಂಡಿದ್ದೇವೆ, ಕೋವಿಡ್‌ ಮಾರಣಾಂತಿಕ ಮಹಾಮಾರಿ ನಮ್ಮನ್ನು ಮನೆಗಳಲ್ಲಿ ಬಂಧಿಸಿಟ್ಟು ಆನ್‌ಲೈನ್‌ ಜಗದಲ್ಲಿ ಒಂದುಗೂಡಿಸಲು ಹೊರಟಿದೆ. ನಮ್ಮ ಮಾತುಕತೆ, ಹರಟೆ, ಬರವಣಿಗೆ, ಕಲಿಕೆ ಮತ್ತು ಮನೋರಂಜನೆ ಮುಂತಾದ ಅಭಿವ್ಯಕ್ತತೆಯ ಮಾಧ್ಯಮ ಇಂಟರ್ನೆಟ್‌ ಮತ್ತು ಆನ್‌ಲೈನ್‌ ಸೇತುವೆಯ ಮೇಲೆ ನಿಂತಿದೆ. ಈ ಅನಿವಾರ್ಯ ಸ್ಥಿತಿಯಲ್ಲಿ ನಾವು ಅರಿತುಕೊಳ್ಳಲೇಬೇಕಿರುವ ಸತ್ಯಗಳು, ಹೊಂಚಿ ಕಾಯುತ್ತಿರುವ ಮೋಸಗಾರರು, ತೆಗೆದುಕೊಳ್ಳಲೇಬೇಕಿರುವ ಮುನ್ನೆಚ್ಚರಿಕೆಗಳು ಈ ಆಯಾಮಗಳ ಮೇಲೆ ಕೇಂದ್ರೀಕರಿಸಿ ಈ ಪುಸ್ತಕ ರಚನೆಯಾಗಿದೆ. ಇದು ಈಗ ತಾನೆ ಹೈಸ್ಕೂಲ್‌ ಗೆ ಕಾಲಿಟ್ಟಿರುವ ಪ್ರೌಢ ವಯಸ್ಕ ಕಿಶೋರರಿಗೆ ಮತ್ತು ಕಾಲೇಜು ಕಲಿಯುತ್ತಿರುವ ತರುಣ-ತರುಣಿಯರಿಗೆ, ಮೊದಲ ಬಾರಿಗೆ ಕಂಪ್ಯೂಟರ್‌ ಪ್ರಪಂಚಕ್ಕೆ ಅಂಬೆಗಾಲಿಡುವ ಎಲ್ಲಾ ಫರ್ಸ್ಟ್‌ ಟೈಂ ಬಳಕೆದಾರರಿಗೆ ಕೈಪಿಡಿಯಾಗಬಲ್ಲದು. ಸೈಬರ್‌ ಕ್ರೈಂ ಕುರಿತಾಗಿ ತನಿಖೆ ಮಾಡುವ ಪೊಲೀಸ್‌ ಅಧಿಕಾರಿಗಳಿಗೂ ಸೂಕ್ತ ಮಾರ್ಗದರ್ಶನ ನೀಡಬಲ್ಲದು ಎನ್ನುವ ಅಧಮ್ಯ ನಂಬಿಕೆ ನನ್ನದು.

ಅತ್ಯಂತ ಸರಳವಾಗಿ ನಿರೂಪಿಸಲ್ಪಟ್ಟ ಈ ಪುಸ್ತಕವನ್ನು ೭ ದಿನಗಳಲ್ಲಿ ಪಟ್ಟಾಗಿ ಕುಳಿತು ಅನುವಾದಿಸುವಾಗ ಎಲ್ಲಿಯೂ ಗೊಂದಲಗಳಾಗಲೀ ಅಥವಾ ಅಪೂರ್ಣ ಎಂದಾಗಲಿ ಅನಿಸಲಿಲ್ಲ. ಅಷ್ಟರಮಟ್ಟಿಗೆ ಶ್ರೀಮತಿ ಜ್ಯೋತ್ಸ್ನಾ ಅವರ ಬರವಣಿಗೆಯ ನಿರೂಪಣೆ ಅರ್ಥಗರ್ಭಿತ ಮತ್ತು ಲಯಬದ್ಧವಾಗಿದೆ. ಇದು ಇವತ್ತಿನ ವಿಚಾರ; ಮುಂದಿನ ಭವಿಷ್ಯದ ಅಪಾಯವನ್ನು ಎದುರಿಸಲು ಇಂದೇ ಕುಳಿತು ಈ ಪುಸ್ತಕ ಓದಿರಿ ಎನ್ನುವ ಸಲಹೆಯೊಂದಿಗೆ ಈ ಪುಸ್ತಕವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ಈ ಪುಸ್ತಕದ ಸುಂದರ ಮುಖಪುಟ (ಕವರ್‌ ಪೇಜ್‌) ರಚಿಸಿದ ವಿನ್ಯಾಸಕ ಶ್ರೀನಿಧಿ ಒಡಿಲ್ನಾಳರಿಗೆ, ಪ್ರೂಫ್‌ ತಿದ್ದಿಕೊಟ್ಟ ಶ್ರೀಮತಿ ಅಂಬಿಕಾರವರಿಗೆ ಮತ್ತು ಪುಸ್ತಕವನ್ನು ಪ್ರಕಟಿಸುತ್ತಿರುವ ವಂಶಿ ಪ್ರಕಾಶನ ಸಂಸ್ಥೆಯ ಶ್ರೀ ಪ್ರಕಾಶ ಅವರಿಗೆ ಅನಂತ ಧನ್ಯವಾದಗಳು. ಈ ಪುಸ್ತಕ ಹೊರಬರಲು ತಮ್ಮದೇ ಆದ ಕೊಡುಗೆ ನೀಡಿರುವ ಓಪೆಲ್‌ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ರಾಘವೇಂದ್ರ ಅವರನ್ನೂ ಇಲ್ಲಿ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕು. ಇನ್ನುಳಿದಂತೆ ಓದುಗರ ಪ್ರೀತಿ ಮತ್ತು ಉತ್ಸಾಹ ಬರಹಗಾರರಿಗೆ ಆಮ್ಲಜನಿಕವಿದ್ದಂತೆ, ಹೀಗಾಗಿ ಕನ್ನಡದ ಸಹೃದಯ ಓದುಗ ಬಂಧುಗಳಿಗೆ ದೊಡ್ಡ ಕೃತಜ್ಞತೆಗಳು..

ಮೂಲ ಲೇಖಕಿ ಶ್ರೀಮತಿ ಜ್ಯೋತ್ಸ್ನಾ ಕಾಸು ಅವರ ಕುರಿತು:

ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೇರಿಕಾದ ಇಲ್ಲಿನೋಯ್ಸ್-ನೇಪರ್‌ವಿಲ್ಲೆಯಲ್ಲಿ ವಾಸವಿರುವ ಎನ್‌ಆರ್‌ಐ ಕನ್ನಡತಿ ಜ್ಯೋತ್ಸ್ನಾ ಕಾಸು, ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ವೃತ್ತಿಪರರು. ಅವರು ಕಳೆದ ೧೫ ವರ್ಷಗಳಿಂದ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳನ್ನು ಅಧ್ಯಯನ ಮಾಡುತ್ತಾ ಬಂದವರು. ಮೂಲತಃ ಬೆಂಗಳೂರಿನವರಾದ ಜ್ಯೋತ್ಸ್ನಾ ಯುಎಸ್‌ಎ ನಾರ್ತ್‌ ಕೆರೋಲೀನಾ ಯೂನಿವರ್ಸಿಟಿ, ಚಾಪೆಲ್‌ ಹಿಲ್‌ನಲ್ಲಿ ಕೋಡಿಂಗ್-ಜಾವಾಸ್ಕ್ರಿಪ್ಟ್‌ ವಿಷಯದಲ್ಲಿ ಉನ್ನತ ವ್ಯಾಸಂಗ ನಡೆಸಿದ್ದಾರೆ ಹಾಗೂ ಇಸಿ-ಕೌನ್ಸಿಲ್‌ನ ಎಥಿಕಲ್‌ ಹ್ಯಾಕರ್‌ ಸರ್ಟಿಫಿಕೇಶನ್ ಸಹ ಪೂರ್ಣಗೊಳಿಸಿಕೊಂಡಿದ್ದಾರೆ. ಯೂನಿವರ್ಸಿಟಿ ಸಿಸ್ಟಂ ಆಫ್‌ ಜಾರ್ಜಿಯಾದಿಂದ ಸೈಬರ್‌ ಸೆಕ್ಯೂರಿಟಿ ಪರಿಣಿತಿ ಪಡೆದುಕೊಂಡಿರುವ ಜ್ಯೋತ್ಸ್ನಾ, ಮೈಸೂರಿನ ಎಸ್‌ಡಿಎಂ-ಐಎಂಡಿಯಲ್ಲಿ ಎಂಬಿಎ ಪದವಿಧರೆ.

ಡೇಟಾ ಸೈನ್ಸ್‌, ಡೇಟಾ ಅನಾಲಿಟಿಕ್ಸ್‌, ಬಿಗ್‌ ಡೇಟಾ, ರೊಬೋಟಿಕ್ಸ್‌, ಹೆಡೂಪ್‌, ಸೈಬರ್‌ ಸೆಕ್ಯೂರಿಟಿ ಮತ್ತು ಅಪಾಯಗಳು ಹೀಗೆ ಸೈಬರ್‌ ಪ್ರಪಂಚದ ಆಳ ಅಗಲ ಅರಿಯಲು ಜ್ಯೋತ್ಸ್ನಾ ಕಲಿತದ್ದು ಬಹಳಷ್ಟು. ತಾವು ಸಂಶೋಧಿಸಿದ್ದನ್ನು ಮತ್ತು ಅಧ್ಯಯನಿಸಿದ್ದನ್ನು ಬರಹ ರೂಪಕ್ಕಿಳಿಸಿದ್ದರ ಪ್ರತಿಫಲವೇ ಈ ಪುಸ್ತಕ. ಓರ್ಟಸ್‌ ಕನ್ಸಲ್ಟಿಂಗ್‌ ಎಲ್‌ಎಲ್‌ಸಿ ಎಂಬ ಸಂಸ್ಥೆಯ ಸಹ ಸಂಸ್ಥಾಪಕರು ಮತ್ತು ನಿರ್ದೇಶಕರೂ ಆಗಿರುವ ಜ್ಯೋತ್ಸ್ನಾ, ೨೦೦೬ರಿಂದಲೂ ಈ ಸಂಸ್ಥೆಯ ಸೈಬರ್‌ ಸೆಕ್ಯೂರಿಟಿ ವಿಭಾಗದಲ್ಲಿ ತಮ್ಮ ಪತಿಯೊಂದಿಗೆ ಕನ್ಸಲ್ಟೆಂಟ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಎಟಿ&ಎಸ್‌ (ಆಸ್ಟ್ರಿಯಾ ಟೆಕ್ನಾಲಜೀಸ್‌ & ಸಿಸ್ಟಂ ಟೆಕ್ನಿಕ್) ಎಂಐಆರ್‌ಸಿ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಒನಿಡಾ, ಮುಂಬೈ) ಜಿಇ ಹೆಲ್ತ್‌ಕೇರ್‌(ಬೆಂಗಳೂರು)ನಲ್ಲಿ ಸಹ ಕಾರ್ಯ ನಿರ್ವಹಿಸಿದ್ದರು.

ದಿನೇ ದಿನೇ ನವೀಕೃತಗೊಳ್ಳುತ್ತಿರುವ ತಂತ್ರಜ್ಞಾನಗಳ ಕುರಿತಾಗಿ ಜ್ಯೋತ್ಸ್ನಾ ಅವರ ಉತ್ಸಾಹ ಮತ್ತು ಕಲಿಕೆ ಅನನ್ಯ. ಜಾಗತಿಕ ವ್ಯಾವಹಾರಿಕ ನೆಟ್‌ವರ್ಕ್‌ನಲ್ಲಿ ಹಲವು ಬೃಹತ್ ತಂತ್ರಜ್ಞಾನಾಧಾರಿತ ಯೋಜನೆಗಳಲ್ಲಿ ಅವರು ಉನ್ನತ ಮಟ್ಟದಲ್ಲಿ ತಮ್ಮ ಅನುಭವ ಧಾರೆಯೆರೆದ್ದಾರೆ. ಜೊತೆಗೆ ಹಲವು ಸ್ಟಾರ್ಟ್‌ ಅಪ್‌ ಸಂಸ್ಥೆಗಳಲ್ಲಿ ಹಾಗೂ ಬೃಹತ್‌ ಉದ್ದಿಮೆಗಳಲ್ಲಿ ಅನೇಕ ತರಹದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ. ತಾವು ಕೆಲಸ ಮಾಡಿದ ಸಂಸ್ಥೆಗಳಲ್ಲಿ ನಿರಂತರ ಕ್ರಿಯಾಶೀಲತೆ, ಸಂಘಟನಾತ್ಮಕ ಚಟುವಟಿಕೆ ಮತ್ತು ಅತ್ಯುತ್ತಮ ಬೆಳವಣಿಗೆ ಹಾಗೂ ಉತ್ಕೃಷ್ಟತೆ ಸಾಧಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಉತ್ಪಾದನಾ ವಲಯ, ಎಲೆಕ್ಟ್ರಾನಿಕ್ಸ್‌, ಸಮಾಲೋಚನೆ (ಕನ್ಸಲ್ಟಿಂಗ್) ಮತ್ತು ಐಟಿ/ಐಟಿಈಎಸ್‌ ಸಂಬಂಧಿತ ಉದ್ಯಮಗಳಲ್ಲಿ ವಿವಿಧ ರೀತಿಯ ಜನರೊಟ್ಟಿಗೆ ಬೆರೆತು ತಮ್ಮ ಪ್ರೌಢಿಮೆ ಪಕ್ವಗೊಳಿಸಿಕೊಂಡಿರುವ ಜ್ಯೋತ್ಸ್ನಾ ಅವರು, ತಾವು ಕೆಲಸ ನಿರ್ವಹಿಸಿದ ಸಂಸ್ಥೆಗಳಿಂದ ವೈವಿಧ್ಯಮಯ ಅನುಭವ ಗಳಿಸಿಕೊಂಡಿದ್ದಾರೆ. ಕ್ರಮೇಣ ಅವರಲ್ಲಿ ಸಂಸ್ಥೆಗಳ ಬೆಳವಣಿಗೆಯ ಗುರುತರ ಹೊಣೆ ನಿಭಾಯಿಸುವಷ್ಟರ ಮಟ್ಟಿನ ಮಹತ್ತರ ಬದಲಾವಣೆಗೆ, ಅವರು ಕಾರ್ಯ ನಿರ್ವಹಿಸಿ ಸಂಸ್ಥೆಗಳ ವಾತಾವರಣದ ಪಾತ್ರ ದೊಡ್ಡದಿದೆ. ಕಲಿಕೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ ಮತ್ತು ಅದಕ್ಕೆ ಅಂತ್ಯ ಎಂಬುದಿಲ್ಲ.

೧೯೯೭ರಲ್ಲಿ ರೂಪದರ್ಶಿ ಮೈಕಲ್‌ ವಸಂತ್‌ ಆಯೋಜಿಸಿದ್ದ ಮಿಸ್‌ ಕರ್ನಾಟಕ ಕಾಂಟೆಸ್ಟ್‌ನಲ್ಲಿ ವಿಜೇತ ಹೆಗ್ಗಳಿಕೆಗೆ ಪಾತ್ರರಾದ ಸೌಂದರ್ಯವತಿ ಜ್ಯೋತ್ಸ್ನಾ. ಬ್ಯೂಟಿ ವಿತ್‌ ಬ್ರೈನ್‌ ಎಂಬ ಮಾತಿಗೆ ಅನುರೂಪವಾದ ವ್ಯಕ್ತಿತ್ವ ಅವರದ್ದು. ಮಾಡೆಲಿಂಗ್‌ ಕ್ಷೇತ್ರದಲ್ಲಿಯೂ ಕೆಲ ಕಾಲ ಮಿಂಚಿದ್ದ ಅವರು, ಸ್ಮಿತ್‌ಕ್ಲಿನ್‌, ಬ್ರೂಕ್‌ಬಾಂಡ್‌, ಬೆಡ್‌ಸಿ ಮ್ಯಾಟರ್‌, ಅಲಾಪಟ್‌ ಜ್ಯೂವೆಲ್ಲರಿ ಮುಂತಾದ ಪ್ರತಿಷ್ಟಿತ ಮತ್ತು ಜನಪ್ರಿಯ ಕಂಪೆನಿಗಳ ಜಾಹಿರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದರು. ಜ್ಯೋತ್ಸ್ನಾ ತಮ್ಮ ಪತಿ ಪ್ರಭಾಕರ್‌ ಕಾಸು ಹಾಗೂ ಪುತ್ರ ಆರ್ಯನ್‌ ಕಾಸು ಅವರೊಂದಿಗೆ ಸದ್ಯ ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೇರಿಕಾದ ಇಲ್ಲಿನೋಯ್ಸ್-ನೇಪರ್‌ವಿಲ್ಲೆಯಲ್ಲಿ ವಾಸಿವಿದ್ದಾರೆ.

ಬದುಕು ಪ್ರತಿನಿತ್ಯವೂ ಅನೇಕ ವಿಚಾರಗಳ ಪಾಠ ಕಲಿಸುತ್ತಲೇ ಇರುತ್ತದೆ ಎಂದು ನಂಬಿರುವ ಅವರು, ಏನನ್ನಾದರೂ ಕಲಿಯಲು ಬಯಸಿದರೇ, ಆ ತಂತ್ರಜ್ಞಾನದ ಆಳಕ್ಕೆ ತಲುಪಿ ಗ್ರಹಿಸುವ ಹಠ ಮತ್ತು ಗುಣ ಹೊಂದಿದ್ದಾರೆ. ಹೀಗೆ ಹೊಸ ಸಂಗತಿಗಳನ್ನು ಕಲಿಯುವ ಅಧಮ್ಯ ಉತ್ಸಾಹದ ಜೊತೆಯೇ ತಾವು ಕಲಿತಿದ್ದನ್ನು ಉಳಿದವರಿಗೆ ಹಂಚುವ ಮತ್ತು ತಮ್ಮ ವಿಶೇಷ ಅಭಿವ್ಯಕ್ತ ಮಾಧ್ಯಮಗಳ ಮೂಲಕ ಕಲಿಸುವ ಆಸಕ್ತಿಯುಳ್ಳ ಪ್ರತಿಭಾವಂತೆ ಜ್ಯೋತ್ಸ್ನಾ. ಈ ಎಲ್ಲಾ ಅವರ ಗುಣಗಳ ಪ್ರತಿಫಲವೇ ಸೈಬರ್‌ ಅಪಾಯಗಳ ಕುರಿತಾಗಿ ಸಂಪೂರ್ಣ ಮಾಹಿತಿ ನೀಡುವ ಸರಳ ನಿರೂಪಣೆಯ ಈ ಪುಸ್ತಕ. ಸೈಬರ್‌ ಸುರಕ್ಷತೆ ಕುರಿತಾಗಿ ಜಾಗೃತಿ ಮೂಡಿಸುವ ಹೊತ್ತಿನಲ್ಲಿ ಜ್ಯೋತ್ಸ್ನಾ ಅವರ ಈ ಪುಸ್ತಕ ನಿಜಕ್ಕೂ ಅತ್ಯುತ್ತಮ ಪ್ರಯತ್ನ. ಮೂಲ ಇಂಗ್ಲೀಷ್‌ ನಲ್ಲಿರುವ ಈ ಕೃತಿ ಈಗ ಕನ್ನಡಕ್ಕೆ ಅನುವಾದಗೊಳ್ಳುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿದ ಅವರ ಮುಂದಿನ ಪುಸ್ತಕ ಸೈಬರ್‌ ಲೋಕದ ಇನ್ನಷ್ಟು ಮಾಹಿತಿಗಳ ಭಂಡಾರ ಹೊತ್ತು ಈ ಪುಸ್ತಕದ ಮುಂದುವರಿಕೆಯಾಗಿ ವರ್ಷನ್‌ ೨.೦ ರೂಪುಗೊಳ್ಳುತ್ತಿದೆ.
*

ಸಾಯಿನಾಥನ ಅಸ್ಥಿತ್ವ ನಂಬುವ ಶ್ರದ್ಧಾವಂತ ಭಕ್ತರಿಗಾಗಿ ಸಾಯಿ ಸ್ಮೃತಿ ಎಂಬ ಕಿರುಪುಸ್ತಕ:

ಕಲಿಯುಗದ ಕಲ್ಪವೃಕ್ಷ, ನಿತ್ಯವಂಧಿತ – ಪ್ರಾತಃಸ್ಮರಣೀಯ ʼಸಬ್‌ ಕಾ ಮಾಲಿಕ್‌ ಏಕ್‌ ಹೈʼ ಎಂದ ನಮ್ಮೆಲ್ಲರ ಮನಸಿನ ಮಾಲೀಕ, ಬಾಬಾ ಶ್ರೀ ಸಾಯಿರಾಮನ ಪಾದಾರವಿಂದಕ್ಕೆ ಶತಕೋಟಿ ನಮನಗಳು ಸಮರ್ಪಿತ.

ಈ ಪುಟ್ಟ ಹೊತ್ತಿಗೆಯಲ್ಲಿರುವ ಸಾಯಿ ಭಗವಾನ್‌ ಸಪ್ತ ಪವಾಡಗಳು ಹಾಗೂ ಆರತಿ ಸಾಯಿಗೀತೆಗಳು, ಸಾಯಿಸ್ಮರಣೆಯ ಭಜನೆ ಎಲ್ಲವೂ ಚಿನ್ಮಯರೂಪಿ ಸಚ್ಚಿದಾನಂತಾತ್ಮಕ ಸಾಯಿ ಮಹಾಮಹಿಮನ ಅಖಂಡ ಭಕ್ತಿಗೆ ಅರ್ಪಣೆ. ಸತ್ಪುರುಷ ಶ್ರೀಸಾಯಿದೇವನ ಅಸಂಖ್ಯ ಚಮತ್ಕಾರಗಳನ್ನು ನಂಬುವ ಅಗಣಿತ ಭಕ್ತರಿಗೆ ಈ ಕಿರುಪುಸ್ತಕ ಮತ್ತು ಇದರಲ್ಲಿರುವ ಸಾಯಿ ಸಂದೇಶಗಳು ಅಜ್ಞಾನದಿಂದ ಸುಜ್ಞಾನಕ್ಕೆ ದಾರಿ ತೋರಲಿ ಎನ್ನುವ ಸದಾಶಯ ನಮ್ಮದು.

ಹಿಂದೊಮ್ಮೆ ಭಾರತದ ಬೀದಿಗಳಲ್ಲಿ ನಡೆದಾಡಿದ ಫಕೀರ, ನಡೆದಾಡುವ ದೇವರಾದ ಪವಾಡ ಈ ದೇಶದ ಪರಮ ಸುಕೃತ ಮತ್ತು ಆಧ್ಯಾತ್ಮಿಕ ಶಕ್ತಿಯ ಅಮೂರ್ತ ವಿಶ್ವರೂಪದ ಒಂದು ಸಣ್ಣ ಸಂಕೇತ. ಸಹನೆ, ಪ್ರೇಮ ಮತ್ತು ಕಾರುಣ್ಯಗಳೆಂಬ ಸಾಯಿಸೂತ್ರಗಳು ನಮ್ಮೆಲ್ಲರ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲೆಗೊಳ್ಳಲಿ. ಅನನ್ಯ ಭಕ್ತಿ ಭಾವದಿಂದ – ಅಧಮ್ಯ ಶ್ರದ್ಧೆಯಿಂದ – ಅಕಳಂಕ ಚಿತ್ತದಿಂದ – ಐಕ್ಯತಾ ದೃಷ್ಟಿಯಿಂದ ಆ ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿ ಯೋಗಿರಾಜ ಸಾಯಿಗುರುವಿನ ಪರಮ ಪವಿತ್ರ ಸ್ಮೃತಿಯಲ್ಲಿ ಲೀನರಾಗೋಣ; ಪುನೀತರಾಗೋಣ.

ನಾವೆಲ್ಲರೂ ಒಂದಿಲ್ಲೊಂದು ನಿರ್ದಿಷ್ಟವಾದ ಉದ್ದೇಶಗಳಿಗಾಗಿ ಇಲ್ಲಿದ್ದೇವೆ; ನಮಗೆ ದಕ್ಕಿರುವ ಈ ಅಮೂಲ್ಯ ಜೀವನಕ್ಕೆ ನಾವು ಖಂಡಿತಾ ನ್ಯಾಯ ಒದಗಿಸಬೇಕು. ಕೆಲವೊಮ್ಮೆ ನಾವು ಸಮಸ್ಯೆಗಳನ್ನು ತುಂಬಾ ದೊಡ್ಡದೆಂದು ಭಾವಿಸುತ್ತೇವೆ, ಆಗ ಅದರ ಪರಿಹಾರ ಪವಾಡದಂತೆ ಕಾಣಿಸುತ್ತದೆ. ನಾವು ಪ್ರತಿ ಸಮಸ್ಯೆಯ ಮೂಲಕ್ಕೆ ತಲುಪಿದಾಗ ಮಾತ್ರ ಆ ಸಮಸ್ಯೆಗಳನ್ನು ಪರಿಹರಿಸಬಹುದು. ಸಮಸ್ಯೆಯ ನಿಜವಾದ ಕಾರಣವನ್ನು ಅರ್ಥಮಾಡಿಕೊಳ್ಳಲು ನಾವು ಅಂತಹ ಪರಿಸ್ಥಿತಿಯನ್ನು ವಿಶ್ಲೇಷಿಸುವಲ್ಲಿ ಜಾಗರೂಕರಾಗಿರಬೇಕು ಜೊತೆಗೆ ಅವುಗಳನ್ನು ನಿವಾರಿಸಲು ನಂಬಿಕೆ ಮತ್ತು ಸಹನೆ ಹೊಂದಿರಬೇಕು.

ಕಲಿಯುಗದ ದಿವ್ಯ ಅವತಾರ ಪುರುಷ, ಚಮತ್ಕಾರಿ ಯೋಗಿರಾಜ ಶಿರಡಿಯ ಸಾಯಿಬಾಬಾ ಅವರ ಪವಾಡಗಳ ಕುರಿತು ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ನೊಂದ ಜನಸಮುದಾಯದ ಮೇಲಿನ ಬಾಬಾರ ಕಾರುಣ್ಯದ ಕಡಲು ಈಗಲೂ ಮನೆಮಾತಾಗಿರುವುದನ್ನು ನಾವೆಲ್ಲರೂ ಬಲ್ಲೆವು. ಬಾಬಾರ ನಿಷ್ಕಲ್ಮಶ ಪ್ರೇಮ, ಅನನ್ಯ ಸೇವಾ ಮನೋಭಾವನೆ ಮತ್ತು ಅತ್ಯುತ್ಕೃಷ್ಟ ಆಧ್ಯಾತ್ಮಿಕ ಚಿಂತನೆಗಳನ್ನು ಕೆಲವೇ ಶಬ್ಧಗಳಲ್ಲಿ ಕೆಲವೇ ವಾಕ್ಯಗಳಲ್ಲಿ ಹಿಡಿದಿಡುವುದು ಕುಂಭದ್ರೋಣ ಮಳೆಯನ್ನು ಬೊಗಸೆಯಲ್ಲಿ ಹಿಡಿದಂತೆ. ಆದರೂ ಈ ಸಣ್ಣ ಪುಸ್ತಕದಲ್ಲಿ ಬಾಬಾ ಸ್ಮರಣೆ ಮಾಡುವ ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ. ಜನರು ಬಾಬಾರ ಪವಾಡಗಳನ್ನು ವರ್ಣಿಸಿದಾಗ, ಅಂತರ್ಜಾಲದಲ್ಲಿ ಬಾಬಾರ ಚಮತ್ಕಾರದ ದೃಶ್ಯಾಂತಗಳನ್ನು ಓದಿದಾಗ, ಇದನ್ನೇಕೆ ಬರಹರೂಪದಲ್ಲಿ ದಾಖಲಿಸಿ ಪ್ರಕಟಿಸಬಾರದು ಎನ್ನುವ ಆಲೋಚನೆಯೇ ಈ ಕಿರು-ಪುಸ್ತಕ ರಚನೆಗೆ ಕಾರಣ. ಇಲ್ಲಿನ ಬಾಬಾ ಮಿರಾಕಲ್‌ ಘಟನೆಗಳನ್ನು, “ಹಾರ್ಟ್ ಟಚಿಂಗ್ ಸ್ಟೋರೀಸ್ ಬೈ ಸಾಯಿ ಬಾಬಾಸ್‌ ಸ್ಟೋರೀಸ್” (“Heart Touching Stories by Sai Baba’s stories) ಎಂಬ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.

ಸಾಯಿ ಭಕ್ತರು ನಿರೂಪಿಸಿರುವಂತೆ ಯಥಾವತ್‌ ಕಥಾನಕಗಳನ್ನು ಪ್ರಸ್ತುತಪಡಿಸಲು ಇಲ್ಲಿ ಪ್ರಯತ್ನಿಸಿದ್ದೇವೆ. ಇಂದಿನ ಯಾಂತ್ರಿಕ ಬದುಕು ಮತ್ತು ವೇಗದ ಜೀವನಶೈಲಿಯ ನಿರಂತರ ಕಾರ್ಯದೊತ್ತಡದ ನಡುವೆ ಪ್ರತಿಯೊಬ್ಬರಿಗೂ ಅಂತರ್ಜಾಲದಲ್ಲಿ ಪ್ರವೇಶಿಸಿ, ವೆಬ್‌ಸೈಟ್‌ಗಳಲ್ಲಿ ಹುಡುಕಲು ಸಮಯವಿರುವುದಿಲ್ಲ, ಆದ್ದರಿಂದ ಈ ಪುಸ್ತಕ ಹೊಂದಿರುವ ವಿಷಯವು, ಪ್ರಪಂಚದಾದ್ಯಂತದ ಭಕ್ತರು ಬರೆದ ಬಾಬಾ ಅವರ ಕಥೆಗಳ ಸಂಯೋಜನೆಯಾಗಿದೆ.

ಜಗತ್ತು ಇಂದು ಕೋವಿಡ್‌-೧೯ ಎಂಬ ಸಾಂಕ್ರಾಮಿಕ ವ್ಯಾಧಿ ತನ್ನ ಕರಾಳ ಕಬಂಧ ಬಾಹುಗಳನ್ನು ಚಾಚಿಕೊಂಡು ರೌದ್ರ ನರ್ತನಗೈಯುತ್ತಿರುವ ಭೀತ ಸ್ಥಿತಿಯಲ್ಲಿದೆ. ಈ ಸವಾಲಿನ ಸಮಯದಲ್ಲಿ ಜೀವಜಗತ್ತಿನ ಪ್ರತಿಯೊಬ್ಬ ಮನುಷ್ಯನು ದೈವಿಕ ಶಕ್ತಿಯ ಮೊರೆಹೋಗಬೇಕಿದೆ ಮತ್ತು ಆಶೀರ್ವಾದ ಪಡೆಯಲು ಪ್ರಾರ್ಥಿಸಬೇಕಿದೆ. ಸಾಂಕ್ರಾಮಿಕ ಕೋವಿಡ್‌-೧೯ ಕೊರೊನಾವೈರಸ್ ಅನ್ನು ನಿರ್ಮೂಲನೆ ಮಾಡಲು, ದೈವಿಕ ಶಕ್ತಿಯಾದ ಜಗನ್ನಿಯಾಮಕ ಭಗವಂತನನ್ನು ಪ್ರಾರ್ಥಿಸುವ ಮೂಲಕ ನಾವು ಈ ಪುಸ್ತಕವನ್ನು ಪ್ರಸ್ತುತಪಡಿಸುತ್ತಿದ್ದೇನೆ. ಈ ಜಗತ್ತಿನ ಸರ್ವರಿಗೂ ಮರಳಿ ಸುಖ-ಶಾಂತಿ-ನೆಮ್ಮದಿ ದೊರೆಯಲು ಎಂದು ಆಶಿಸುತ್ತೇವೆ.
ಅನಂತ ಕೀರ್ತಿಶಿಖರ, ಅಕ್ಷಯರೂಪ, ಸಾಯಿ ದಿಗಂಬರಾ, ಕೈವಲ್ಯ ಧಾಮ ಆ ಸಚ್ಚಿದಾನಂದ ಪರಬ್ರಹ್ಮ ಶ್ರೀಸಾಯಿನಾಥ ಮಹರಾಜ್ ನಮ್ಮೆಲ್ಲರ ಹೃದಯಗಳಲಿ ಸಾತ್ವಿಕ ಬೆಳಕನ್ನು ಪಸರಿಸಲು ಎಂದು ಪ್ರಾರ್ಥಿಸೋಣ. ಸರ್ವರಿಗೂ ಈ ಮೂಲಕ ಸಾಯಿಸ್ಮರಣೆಗೆ ನಮ್ರತೆಯ ಆಮಂತ್ರಣ; ಶುಭ ಹಾರೈಕೆಗಳೊಂದಿಗೆ.

-ಜ್ಯೋತ್ಸ್ನಾ ಕಾಸು, ನೇಪರ್‌ವಿಲ್ಲೆ, ಯುಎಸ್‌ಎ
-ವಿಶ್ವಾಸ್‌ ಭಾರದ್ವಾಜ್, ಬೆಳ್ಳಿ ಕ್ರಿಯೇಷನ್ಸ್‌, ಬೆಂಗಳೂರು

(“ಎಲ್ಲರ ಮಾಲೀಕ ಅವನೊಬ್ಬನೇ”-ಓಂ ಸಾಯಿರಾಂ)

*

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd