Agumbe
ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯ ಹೇಳಿ ಕೇಳಿ ಪ್ರವಾಸಿತಾಣಗಳಿಗೆ ಫೇಮಸ್.. ಭಾರತದ ಮೂರನೇ ಪ್ರಸಿದ್ಧ ಪ್ರವಾಸಿ ತಾಣಗಳ ರಾಜ್ಯ ಎಂದ್ರೆ ಅದು ಕರುನಾಡು. ಇಂತಹ ಕರ್ನಾಟಕದಲ್ಲೇ ಬರುವ ಒಂದು ಪ್ರಸಿದ್ಧ ಹಾಗೂ ಸುಂದರ ಪ್ರವಾಸಿ ತಾಣವೆಂದ್ರೆ ಅದು ಆಗುಂಬೆ. ಆಗುಂಬೆಯ ಪ್ರಕೃತಿ ಸೌಂದರ್ಯ ಅದ್ವಿತೀಯ. ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಬರುವ ರೋಮಾಂಚನಕಾರಿ ಅನುಭೂತಿ ನೀಡುವ ಪ್ರಸಿದ್ಧ ಪ್ರವಾಸಿ ತಾಣ.
ಅದ್ರಲ್ಲೂ ಆಗುಂಬೆಯಲ್ಲಿ ಸೂರ್ಯಾಸ್ತ ನೋಡುವುದೇ ಕಣ್ಣಿಗೆ ಹಬ್ಬ. ಇಲ್ಲಿಗೆ ಸೂರ್ಯಾಸ್ತವನ್ನು ನೋಡಲು ನಿತ್ಯ ಸಾವಿರಾರು ಜನರು ಭೇಟಿ ನಿಡ್ತಾರೆ. ಮುಳುಗುವ ಸೂರ್ಯನ ದೃಶ್ಯ ಅತ್ಯಂತ ಮುದನೀಡುತ್ತದೆ. ಆದರೆ ಮಳೆಯೇ ಮಲೆನಾಡಿನ ಜೀವಾಳ. ಮಳೆಗಾಲದಲ್ಲಿ ಕಾದಿದ್ದು, ಸೂರ್ಯಾಸ್ತವನ್ನು ಕಾಣುವುದೇ ಒಂದು ಸಡಗರದ ಸನ್ನಿವೇಶ. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಆಗುಂಬೆಯೂ ಒಂದು. ಈ ಕಾರಣಕ್ಕಗಿಯೆ ಆಗುಂಬೆಯನ್ನು “ದಕ್ಷಿಣದ ಚಿರಾಪುಂಜಿ” ಎಂದೂ ಕರೆಯುತ್ತಾರೆ. ಭಾರತದ ಏಕೈಕ ಶಾಶ್ವತ ಹರಿದ್ವರ್ಣವನ ಸಂಶೋಧನ ಕೇಂದ್ರ ಆಗುಂಬೆಯಲ್ಲಿದೆ. ಹೆಸರುವಾಸಿ ಉರಗತಜ್ಞ ರೊಮುಲುಸ್ ವಿಟೆಕರ್ ಆಗುಂಬೆಯನ್ನು “ಕಾಳಿಂಗ ಸರ್ಪಗಳ ರಾಜಧಾನಿ” ಎಂದು ಕರೆದಿದ್ದಾರೆ.
ಸುತ್ತಲೂ ಕಾಡು ಗಿಡಮರಗಳು ದಟ್ಟಾರಣ್ಯದ ನಟ್ಟ ನಡುವೆ ಹಚ್ಚ ಹಸಿರಿನಿಂದ ಕಂಗೊಳಿಸುವ ಆಗುಂಬೆ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನ ಮೂಕವಿಸ್ಮಿತರನ್ನಾಗಿಸುತ್ತೆ. ಸುತ್ತಲೂ ಘಟ್ಟಪ್ರದೇಶಗಳು ಪ್ರಪಾತಗಳಿಂದ ಕೂಡಿರುವ ರಸ್ತೆಯಲ್ಲಿ ಹೋಗುತ್ತಿದ್ರೆ ಒಂದು ಕಡೆ ರೋಮಾಂಚನಕಾರಿ, ಮತ್ತೊಂದೆಡೆ ಪ್ರಕೃತಿಯ ಸೌಂದರ್ಯ ಸವಿಯುವ ಅದೃಷ್ಟ ಸಿಗುತ್ತೆ. ಇನ್ನೂ ಆಗುಂಬೆಯಲ್ಲಿ ರಕ್ತ ಹೀರುವ ಜಿಗಣೆಗಳು ಹೆಚ್ಚಾಗಿಇರುತ್ತವೆ. ಹೀಗಾಗಿ ಈ ಪ್ರದೇಶದಲ್ಲಿ ಕೊಂಚ ಎಚ್ಚರಿಕೆಯಿಂದ ಇರುವುದು ಉತ್ತಮ.
ಆಗುಂಬೆ ಜಮದಗ್ನಿ-ರೇಣುಕಾದೇವಿಯರ ಮಗನಾದ ಪರಶುರಾಮನ ಊರು ಎಂಬ ನಂಬಿಕೆ ಇದೆ. ಅವನು ತನ್ನ ತಂದೆಯ ಮರಣಕ್ಕೆ ಕಾರಣನಾದ ಕಾರ್ತವೀರ್ಯಾರ್ಜುನನನ್ನು ಈಶ್ವರದತ್ತವಾದ ತನ್ನ ಪರಶುವಿಗೆ ಬಲಿಗೊಟ್ಟು, ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯ ಕುಲವನ್ನೇ ನಿರ್ಮೂಲ ಮಾಡಿದನಂತೆ. ಈ ಕ್ಷತ್ರಿಯಹತ್ಯೆಯ ಪಾಪವನ್ನು ಕಳೆದುಕೊಳ್ಳಲು ಅಶ್ವಮೇಧ ಯಾಗ ಮಾಡಿ, ಆತ ಸಮಸ್ತ ಭೂಮಿಯನ್ನು ಕಶ್ಯಪ ಋಷಿಗೆ ಧಾರೆಯೆರೆದು ದಾನಕೊಟ್ಟನಂತೆ.
ಆಗ ಪರಶುರಾಮನಿಗೆ ಇರಲು ಸ್ಥಳವಿಲ್ಲದೆ ಆಗುಂಬೆಯ ಸಹ್ಯಾದ್ರಿ ಶಿಖರದಲ್ಲಿ ನಿಂತು ಎದುರುಗಡೆಯ ಸಮುದ್ರಕ್ಕೆ ಈ ಪರಶು ಹೋದಷ್ಟು ದೂರ ತನಗೆ ಸ್ಥಳಕೊಡು ಎಂದು ಪ್ರಾರ್ಥಿಸಿ ತನ್ನ ಕೊಡಲಿಯನ್ನು ಎಸೆದನಂತೆ. ಸಮುದ್ರ ಸಹ್ಯಾದ್ರಿಯಿಂದ ಹಿಂದಕ್ಕೆ ಉರುಳಿತಂತೆ. ಅಂದಿನಿಂದ ಆ ಭಾಗದ ಪಶ್ಚಿಮ ಕರಾವಳಿಯೆಲ್ಲ ಪರಶುರಾಮಕ್ಷೇತ್ರವೆಂದು ಹೆಸರಾಯಿತು ಎಂದು ಹೇಳಲಾಗಿದೆ. ಹೀಗೆ ಪೌರಾಣಿಕವಾಗಿಯೂ ಆಗುಂಬೆಗೆ ಮಹತ್ವವಿದೆ.
ಆಗುಂಬೆಯ ಪೇಟೆಯಿಂದ ಸುಮಾರು ಒಂದು ಮೈಲು ಪಶ್ಚಿಮದಲ್ಲಿ ಆಗುಂಬೆಯ ಜಗತ್ಪ್ರಸಿದ್ಧ ಸೂರ್ಯಾಸ್ತಮಾನ ದೃಶ್ಯವನ್ನು ಕಾಣಲು ಬೆಟ್ಟದ ನೆತ್ತಿಯಲ್ಲಿ ಒಂದು ರಂಗಸ್ಥಳವನ್ನು ಮಾಡಿದ್ದಾರೆ. ವರ್ಷವಿಡೀ-ಮಳೆಗಾಲ ಹೊರತು-ಈ ಭೂಮದೃಶ್ಯವನ್ನು ನೋಡಲು ದೇಶೀಯ, ವಿದೇಶೀಯ ಪ್ರವಾಸಿಗಳು ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಮೋಡವಲ್ಲದ ಶುಭ್ರ ಸಂಜೆಗಳಲ್ಲಿ ಸೂರ್ಯಾಸ್ತವನ್ನು ನೋಡಲು ಚೆನ್ನ. ಈ ರಂಗಸ್ಥಳದಿಂದ ಇದ್ದಕ್ಕಿದ್ದಂತೆ ಸುಮಾರು 3,000′ ಪಾತಾಳ ದರ್ಶನ ಮೈನವಿರೇಳಿಸುವಂಥದು. ಕೇವಲ ಆಳ ಮಾತ್ರವಲ್ಲ, ಪಡುಗಡಲ ತಡಿಯವರೆಗಿನ, ಅಲ್ಲಿಂದ ದಿಗಂತದ ಅಂಚಿನವರೆಗಿನ ಸುಮಾರು 30 ಮೈಲುಗಳ ವಿಸ್ತಾರ ಒಮ್ಮೆಗೇ ಕಣ್ಣುಗಳನ್ನು ತುಂಬುತ್ತದೆ. ಆ ಕ್ಷಣದಲ್ಲಿ ಆಗುವ ಅನುಭವ ಮಾತಿಗೆ ಮೀರಿದುದು; ಮೌನವಾಗಿ ಅನುಭವಿಸುವಂಥದು. ಸೂರ್ಯಾಸ್ತಮಾನದ ಸುಂದರದೃಶ್ಯವನ್ನು ನೋಡಲು ರಂಗಸ್ಥಳದಲ್ಲಿ ಸಂಜೆಯ ಹೊತ್ತು ಕುಳಿತು ಪ್ರಕೃತಿ ತೋರುವ ವಿವಿಧವೇಷಗಳನ್ನು ಕಾಣಬೇಕು. ನಿಸರ್ಗ ತನ್ನ ನೂರಾರು ಸೀರೆಗಳನ್ನು ಉಟ್ಟು ಕಳಚುತ್ತಿರುತ್ತದೆ. ಜೀವಮಾನದಲ್ಲಿ ಒಮ್ಮೆಯಾದರೂ ಆಗುಂಬೆಗೆ ಭೇಟಿ ನೀಡಿ ಇಲ್ಲಿನ ಸೊಬಗನ್ನು ಕಣ್ತುಂಬಿಕೊಳ್ಳಲೇ ಬೇಕು.
Agumbe
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel