ಬೆಂಗಳೂರು:ಎಐಸಿಸಿ ಖಜಾಂಚಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಅಹ್ಮದ್ ಪಟೇಲ್ ಅವರ ಅಗಲಿಕೆ ಸುದ್ದಿ ಆಘಾತ ತಂದಿದೆ. ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಶಕ್ತಿಯಾಗಿದ್ದರು. ತಮ್ಮ ಇಡೀ ಜೀವನವನ್ನು ಪಕ್ಷಕ್ಕೆ ಮುಡಿಪಾಗಿಟ್ಟ ನಿಷ್ಠಾವಂತ ನಾಯಕರು ಅವರು ಎಂದು ಶಿವಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ.
ಪಕ್ಷ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದಾಗಲೆಲ್ಲ ಬಲವಾಗಿ ನಿಲ್ಲುತ್ತಿದ್ದವರು ಅಹ್ಮದ್ ಪಟೇಲ್. ಪಕ್ಷಕ್ಕೆ ಆಧಾರ ಸ್ತಂಭದಂತಿದ್ದ ಹಿರಿಯ ನಾಯಕನ ಅಗಲಿಕೆ ಪಕ್ಷಕ್ಕೆ ಭರಿಸಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಅಹ್ಮದ್ ಪಟೇಲ್ ಅವರ ಜತೆ ಮೊದಲಿಂದಲೂ ಉತ್ತಮ ಒಡನಾಟ ಹೊಂದಿದ್ದೆ. ಅವರು ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ಮಾರ್ಗದರ್ಶಕರಾಗಿದ್ದರು. ಅವರ ಆಲೋಚನೆ, ವಿಚಾರ, ಸಿದ್ಧಾಂತಗಳು ನಮ್ಮೆಲ್ಲರಿಗೂ ಮಾದರಿಯಾಗಿತ್ತು ಎಂದು ಶಿವಕುಮಾರ್ ಅವರು ಹೇಳಿದ್ದಾರೆ.
ಮೃತರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳಿಗೆ ನೀಡಲಿ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿ.ಕೆ ಶಿವಕುಮಾರ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel