ದಕ್ಷಿಣ ಅಂಡಮಾನನಲ್ಲಿ ವಾಯುಭಾರ ಕುಸಿತ | ಮೇ 10ವರೆಗೆ ರಾಜ್ಯದಲ್ಲಿ ಮಳೆ
ಬೆಂಗಳೂರು: ಆಂದ್ರಪ್ರದೇಶದ ವಿಶಾಖಪಟ್ಟಣಂ, ಒರಿಸ್ಸಾದ ದಕ್ಷಿಣ ಪ್ರದೇಶಗಳಲ್ಲಿ ಸೈಕ್ಲೋನ್ ಅಪ್ಪಳಿಸಿದ್ದು, ರಾಜ್ಯದಲ್ಲಿ ಇನ್ನೂ ಮೂರುದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ದಕ್ಷಿಣ ಭಾರತದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಇನ್ನೂ 3ದಿನ ಕರ್ನಾಟಕದಲ್ಲಿ ವರಣ ಧರೆಗಿಳಿಯಲಿದ್ದಾನೆ. ಬೆಂಗಳೂರಿನಲ್ಲಿ ಮಾತ್ರವಲ್ಲದೇ ಮಲೆನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲೂ ಮೇ 10ರವರಗೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನೆರಡು ದಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಕೂಡ ಇದೆ.
ದಕ್ಷಿಣ ಅಂಡಮಾನನಲ್ಲಿ ವಾಯುಭಾರ ಉಂಟಾಗಿದ್ದು ವಾಯುಭಾರ ಕುಸಿತ ಇಂದು ಮಧ್ಯಾಹ್ನದ ಬಳಿಕ ಚಂಡಮಾರುತ ರೂಪ ಪಡೆಯಲಿದೆ. ಗಾಳಿಯ ವೇಗ 60ರಿಂದ 70 ಕೀಮಿ ಇರಲಿದೆ.