ಮಹಾಮಾರಿ ಕೊರೊನಾ ಬೆಳಗಾವಿ ಜಿಲ್ಲೆಯನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಮೊನ್ನೆಯಷ್ಟೇ 11 ಕೊರೊನಾ ಸೋಂಕು ಪತ್ತೆಯಾಗಿದ್ದರಿಂದ ಬೆಚ್ಚಿ ಬಿದ್ದಿದ್ದ ಕುಂದಾನಗರಿ ಜನರಿಗೆ ಇಂದು ಮತ್ತೆ ಕೊರೊನಾ ಬಿಗ್ ಶಾಕ್ ಕೊಡುವ ಸಾಧ್ಯತೆಯಿದೆ. ಅಜ್ಮೀರ ಪ್ರವಾಸಕ್ಕೆ ತೆರಳಿದ್ದ 28 ಜನರಿಗೆ ಇಂದು ಕೊರೊನಾ ಸೋಂಕು ದೃಢ ಪಡುವ ಶಂಕೆ ವ್ಯಕ್ತವಾಗಿದ್ದು. ಕುಂದಾನಗರಿ ಜನರನ್ನು ಬೆಚ್ಚಿ ಬೀಳಿಸಿದೆ.
ಹೌದು ರವಿವಾರ ಬೆಳಗಾವಿ ಜಿಲ್ಲೆಯ ಪಾಲಿಗೆ ಕರಾಳ ದಿನವಾಗಲಿದೆ. ಇಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಹೊರಡಿಸಲಿದ್ದು. ಇಂದು ಒಂದೇ ದಿನ 28 ಜನರಿಗೆ ಮಹಾಮಾರಿ ಕೊರೊನಾ ವಕ್ಕರಿಸಿಕೊಂಡಿದ್ದು ದೃಢಪಡುವ ಶಂಕೆ ವ್ಯಕ್ತವಾಗಿದೆ. ಈ ಎಲ್ಲರೂ ಕೂಡ ರಾಜಸ್ಥಾನದ ಅಜ್ಮೀರ ದರ್ಗಾಗೆ ಪ್ರವಾಸ ಬೆಳೆಸಿದ್ದರು. ಬೆಳಗಾವಿ ಜಿಲ್ಲೆಯಿಂದ ಸುಮಾರು 38 ಜನರು ರಾಜಸ್ಥಾನದ ಅಜ್ಮೀರ್ ಪ್ರವಾಸಕ್ಕೆ ತೆರಳಿದ್ದರು. ಲಾಕ್‍ಡೌನ್ ಹಿನ್ನೆಲೆ ಅವರು ದರ್ಗಾದಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದರು. ಆದ್ರೆ ರಾಜಸ್ಥಾನ ಸರ್ಕಾರ 1 ತಿಂಗಳ ಬಳಿಕ ಪರೀಕ್ಷೆ ನಡೆಸಿ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ನೀಡಿ ಕರ್ನಾಟಕಕ್ಕೆ ಕಳಿಸಿಕೊಟ್ಟಿತ್ತು. ಇದಾದ ಬಳಿಕ ನಿಪ್ಪಾಣಿಯ ಕೊಗನೊಳ್ಳಿ ಚೆಕ್‍ಪೋಸ್ಟ್‍ನಲ್ಲಿ ಇವರನ್ನು ತಡೆಹಿಡಿಯಲಾಗಿತ್ತು. ಈ ವೇಳೆ ಅನುಮಾನಗೊಂಡ ನಿಪ್ಪಾಣಿ ಪೊಲೀಸರು ಮತ್ತು ವೈದ್ಯರು ಇವರೆಲ್ಲರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. ಈ ವೇಳೆ ನಮ್ಮದು ನೆಗೆಟಿವ್ ರಿಪೋರ್ಟ್ ಬಂದಿದೆ ನಮ್ಮನ್ನು ಊರಿಗೆ ಕಳಿಸಿಕೊಡಿ ಎಂದು ಕೇಳಿಕೊಂಡಿದ್ದರು. ಆಗ ಪೊಲೀಸರು ನಿಮಗೆ ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ಇಲ್ಲ ಎಂದು ಹೇಳಿ ಕ್ವಾರಂಟೈನ್‍ನಲ್ಲಿ ಇಟ್ಟಿದ್ದರು. ಇದಾದ ಬಳಿಕ ಬಳಿಕ ಮೇ 6ರಂದು ಅಷ್ಟೂ ಜನರ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳಿಸಲಾಗಿತ್ತು.
ಈ 38 ಜನರಲ್ಲಿ 28 ಜನರಿಗೆ ಕೊರೊನಾ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ. ಈ 38 ಜನರಲ್ಲಿ ಕೆಲವರು ಸರ್ಕಾರಿ ಐಬಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ರಾಜಸ್ಥಾನದ ವರದಿಯನ್ನು ಆಧರಿಸಿ ರಾಜ್ಯದೊಳಗೆ ಬಿಟ್ಟುಕೊಂಡಿದ್ದರೆ ಜಿಲ್ಲೆಯಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಆದ್ರೆ ನಿಪ್ಪಾಣಿ ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಡೆಯಲು ಸಾಧ್ಯವಾಗಿದೆ. ನಮ್ಮ ರಾಜ್ಯದಿಂದ ಮೊದಲು ಇವರು ಹೊರ ಹೋಗಲಿ ಎಂಬ ಏಕೈಕ ಉದ್ದೇಶದಿಂದ ರಾಜಸ್ಥಾನ ಸರ್ಕಾರ ಸುಳ್ಳು ಸರ್ಟಿಫಿಕೇಟ್ ನೀಡಿ ಕಳಿಸಿದ್ದು ಸಧ್ಯ ತೀವ್ರ ಟೀಕೆಗೆ ಗುರಿಯಾಗಿದೆ.








