All Party Meeting: ಚಳಿಗಾಲದ ಅಧಿವೇಶನಕ್ಕೂ ಮುನ್ನ ಸರ್ವಪಕ್ಷ ಸಭೆ ಕರೆದ ಪ್ರಧಾನಿ…
ಡಿಸೆಂಬರ್ 7 ಅಂದರೇ ಮುಂದಿನ ಬುಧವಾರದಿಂದ ನಡೆಯಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರ ಇಂದು ಸರ್ವಪಕ್ಷ ಸಭೆ ಕರೆದಿದೆ. ರಕ್ಷಣಾ ಸಚಿವ ಹಾಗೂ ಬಿಜೆಪಿ ಸಂಸದ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಸೇರಿದಂತೆ ಹಲವು ಹಿರಿಯ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದಾರೆ.
ಈ ಬಾರಿ ಅಧಿವೇಶನದ ಮುನ್ನಾದಿನದ ಸಾಂಪ್ರದಾಯಿಕ ಸರ್ವಪಕ್ಷ ಸಭೆಯ ಬದಲು ವ್ಯವಹಾರ ಸಲಹಾ ಸಮಿತಿ (ಬಿಎಸಿ) ಸಭೆ ಕರೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. BAC ಸದನದ ಶಾಸಕಾಂಗ ಕಾರ್ಯಸೂಚಿ ಮತ್ತು ಪಕ್ಷಗಳು ಚರ್ಚಿಸಲು ಬಯಸುವ ವಿಷಯಗಳನ್ನು ಚರ್ಚಿಸುತ್ತದೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 7 ರಿಂದ ಆರಂಭವಾಗಲಿದ್ದು, ಡಿಸೆಂಬರ್ 29 ರಂದು ಮುಕ್ತಾಯವಾಗಲಿದೆ. ಈ ಅಧಿವೇಶನದಲ್ಲಿ 17 ಸಭೆಗಳು ನಡೆಯಲಿವೆ. ಕಳೆದ ವಾರ, ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬೇಕಾದ 16 ಮಸೂದೆಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿತು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಲೋಕಸಭೆ ಮತ್ತು ರಾಜ್ಯಸಭೆಯ ವಿವಿಧ ಪಕ್ಷಗಳ ನಾಯಕರಿಗೆ ಈ ಸಭೆಗೆ ಆಹ್ವಾನ ಕಳುಹಿಸಿದ್ದರು.
ಅಧಿವೇಶನದಲ್ಲಿಯೇ ಚುನಾವಣಾ ಫಲಿತಾಂಶ
ಅಧಿವೇಶನದಲ್ಲಿಯೇ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಡಿಸೆಂಬರ್ 8 ರಂದು ಬಹಿರಂಗಗೊಳ್ಳಲಿವೆ. ಹೀಗಿರುವಾಗ ಈ ಎರಡು ರಾಜ್ಯಗಳ ಚುನಾವಣಾ ಫಲಿತಾಂಶದ ಛಾಯೆ ಚಳಿಗಾಲದ ಅಧಿವೇಶನದ ಮೇಲೂ ಕಾಣಲಿದೆ.
All Party Meeting: The central government has called an all party meeting before the winter session.