ಯಾದಗಿರಿ: ಅನೈತಿಕ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಜಿಲ್ಲೆಯ ಎಸ್. ಹೊಸಳ್ಳಿ ಗ್ರಾಮದಲ್ಲಿ ನಡೆದಿದ್ದು, 24 ವರ್ಷದ ಚಂದ್ರಶೇಖರ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡ ಯುವಕ ಎನ್ನಲಾಗಿದೆ. ಮಹಿಳೆ ಜೊತೆ ಅನೈತಿಕ ಸಂಬಂಧ ಆರೋಪ ಹೊತ್ತು ಹಲ್ಲೆಗೆ ಒಳಗಾಗಿದ್ದಕ್ಕೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸಾವನ್ನಪ್ಪಿದ ಯುವಕನ ಮೇಲೆ ಈರಣ್ಣ ಹಾಗೂ ಕುಟುಂಬದವರು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದರು. ಹೀಗಾಗಿ ಗೌರವಕ್ಕೆ ಅಂಜಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸಾಯುವ ಮುನ್ನ ಡೆತ್ ನೋಟ್ ಬರೆದಿರುವ ಮೃತ ಚಂದ್ರಶೇಖರ ರೆಡ್ಡಿ. ಈರಣ್ಣ ಸೇರಿದಂತೆ 8 ಜನರ ಹೆಸರು ಉಲ್ಲೇಖಿಸಿದ್ದಾನೆ. ಇವರು ನನ್ನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾನೆ ಎನ್ನಲಾಗಿದೆ.
ಮೃತ ಚಂದ್ರಶೇಖರ ಗ್ರಾಮದ ಈರಣ್ಣ ಎಂಬ ವ್ಯಕ್ತಿಯ ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಈರಣ್ಣ ಮತ್ತು ಆತನ ಕುಟುಂಬಸ್ಥರು ಮರಕ್ಕೆ ಹಗ್ಗದಿಂದ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದರು. ಅಲ್ಲದೇ ಯುವಕನ ಕುಟುಂಬಸ್ಥರ ಮೇಲೆಯೂ ಹಲ್ಲೆ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ತನ್ನಿಂದಲೇ ಇಷ್ಟೆಲ್ಲ ಆಯಿತು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಘಟನೆಯ ನಂತರ ಈರಣ್ಣನ ಕುಟುಂಬಸ್ಥರು ಪರಾರಿಯಾಗಿದ್ದಾರೆ. ಅವರೇ ಕಾರಣ ಎಂದು ಮೃತ ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.