ಇಂಡಿಯನ್ ಪ್ರೀಮಿಯರ್ ಲೀಗ್(IPL)-2023 ಮೂಲಕ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದ ಅಂಬಟಿ ರಾಯಡು, ಮೇಜರ್ ಲೀಗ್ ಕ್ರಿಕೆಟ್(MLC) ಮೂಲಕ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದ ರಾಯಡು, ಐಪಿಎಲ್-2023ರ ಬಳಿಕ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಘೋಷಣೆ ಮಾಡಿದ್ದರು. ಅದರಲ್ಲೂ 2023ರ ಐಪಿಎಲ್ ಫೈನಲ್‌ನಲ್ಲಿ ಚೆನ್ನೈ ಪ್ರಶಸ್ತಿ ಗೆಲ್ಲುವ ಮೂಲಕ ಅಂಬಟಿ ರಾಯಡು ಅವರಿಗೆ ಅದ್ದೂರಿ ಬೀಳ್ಕೊಡುಗೆ ಸಹ ನೀಡಿತ್ತು.
ಆದರೆ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ ಮಾಡಿದ್ದ ಕೇವಲ ಎರಡು ತಿಂಗಳ ನಡುವೆಯೇ ರಾಯುಡು, ಮೇಜರ್ ಲೀಗ್ ಕ್ರಿಕೆಟ್ ಮೂಲಕ ಹೊಸ ಆವೃತ್ತಿ ಸೂಪರ್ ಕಿಂಗ್ಸ್ ಪರ ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜುಲೈ 13ರಿಂದ ಆರಂಭ ಆಗಲಿರುವ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಅಂಬಟಿ ರಾಯಡು ಕಣಕ್ಕಿಳಿಯಲಿದ್ದು, ಆ ಮೂಲಕ ಮತ್ತೊಮ್ಮೆ ಸೂಪರ್ ಕಿಂಗ್ಸ್ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.
37 ವರ್ಷದ ಬಲಗೈ ಬ್ಯಾಟರ್, ಮೇಜರ್ ಲೀಗ್ ಕ್ರಿಕೆಟ್‌ನ ಸ್ಟಾರ್ ಆಕರ್ಷಣೆಯಾಗಿದ್ದಾರೆ. ಐಪಿಎಲ್‌ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಚೆನ್ನೈ ತಂಡದ ಬ್ಯಾಟಿಂಗ್ ಅಸ್ತ್ರವಾಗಿದ್ದ ರಾಯಡು, 2019ರ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ಅಂಬಟಿ ರಾಯಡು ಅವರೊಂದಿಗೆ ಚೆನ್ನೈ ತಂಡದ ಮಾಜಿ ಆಲ್ರೌಂಡರ್ ಡ್ವೇನ್ ಬ್ರಾವೋ ಸಹ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಫಾಫ್ ಡುಪ್ಲೆಸ್ಸಿ, ಡೇವಿಡ್ ಮಿಲ್ಲರ್, ಡೆವೊನ್ ಕಾನ್ವೆ, ಡೆನಿಯಲ್ ಸ್ಯಾಮ್ಸ್, ಮಿಚೆಲ್ ಸ್ಯಾಂಟ್ನರ್ ಅವರುಗಳು ಸಹ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಸ್ಟಾರ್ ಆಟಗಾರರಾಗಿದ್ದಾರೆ.








