ನವದೆಹಲಿ: ಪ್ರಸ್ತುತ ಅಮೆರಿಕಾ ಹಾಗೂ ಭಾರತದ ಸ್ನೇಹ ಬಾಂಧವ್ಯ ಇತರೆ ದೇಶಗಳ ನಿಬ್ಬೆರಗಾಗುವಂತೆ ಮಾಡಿದೆ. ಇದು ಶತ್ರು ರಾಷ್ಟ್ರಗಳಿಗೆ ಆತಂಕವೂ ಕೂಡ ಆಗಿದೆ. ಅದರಲ್ಲೂ ಪಾಕಿಸ್ತಾನ ಹಾಗೂ ಚೀನಾ ದೇಶಗಳು ಅಮೆರಿಕಾ ಮತ್ತು ಭಾರತದ ಮಿತ್ರತ್ವವನ್ನ ಕಂಡು ಅಸೂಯೆ ಪಟ್ಟುಕೊಳ್ಳುತ್ತಿರುವುದು ದೇಶವಿದೇಶಗಳಿಗೆ ತಿಳಿದಿದೆ. ಇದೀಗ ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸುತ್ತಿರುವುದು ಶತ್ರು ರಾಷ್ಟ್ರಗಳ ನಿದ್ದೆಗೆಡಿಸಿದೆ.
ಹೌದು.. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ದಿನಾಂಕ ನಿಗದಿಯಾಗಿದೆ. ಇದೇ ಫೆಬ್ರವರಿ 24ರ ಸೋಮವಾರ ಮತ್ತು 25ರ ಮಂಗಳವಾರ ಎರಡು ದಿನಗಳ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಕೆಲವು ದಿನಗಳ ಹಿಂದೆ ವೈಟ್ ಹೌಸ್ ಟ್ರಂಪ್ ಭಾರತಕ್ಕೆ ಪ್ರವಾಸ ಕೈಗೊಳ್ಳುವ ಬಗ್ಗೆ ವರದಿ ಮಾಡಿತ್ತು. ಇದೀಗ ದಿನಾಂಕವನ್ನು ನಿಗದಿ ಮಾಡಿ, ಅದನ್ನ ಖಚಿತಪಡಿಸಿದೆ.
ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರಿಸಿದ ಬಳಿಕ ಇದೇ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿರುವುದು ವಿಶೇಷವಾಗಿದೆ. ಟ್ರಂಪ್ ಜತೆ ಪತ್ನಿ ಮಲೆನಿಯಾ ಭಾರತಕ್ಕೆ ಆಗಮಿಸುತ್ತಿದ್ದು, ನವದೆಹಲಿ ಮತ್ತು ಗುಜರಾತ್ ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ವರ್ಷ ಅಮೆರಿಕದ ಹೂಸ್ಟನ್ನಲ್ಲಿ ನಡೆದ ‘ಹೌಡಿ ಮೋಡಿ’ ಎಂಬ ಕಾರ್ಯಕ್ರಮದಂತೆ ಟ್ರಂಪ್ ಭಾರತ ಭೇಟಿ ವೇಳೆ ಅದೇ ಮಾದರಿ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಬಗ್ಗೆ ನಿರ್ಧರಿಸಲಾಗಿದೆ ಎನ್ನಲಾಗಿದೆ.