ಭಾರತೀಯ ಹುತಾತ್ಮ ಸೈನಿಕರಿಗೆ ಸಂತಾಪ ಸೂಚಿಸಿದ ಅಮೆರಿಕ
ಹೊಸದಿಲ್ಲಿ, ಜೂನ್ 20: ಅಮೆರಿಕ, ಪೂರ್ವ ಲಡಾಖ್ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರಿಂದ ಬರ್ಬರ ಹತ್ಯೆಗೊಳಗಾದ ಭಾರತೀಯ ಸೈನಿಕರ ಮರಣಕ್ಕೆ ಸಂತಾಪ ಸೂಚಿಸಿದೆ ಮತ್ತು ಭಾರತೀಯ ಸೈನಿಕರ ಧೈರ್ಯವನ್ನು ಕೊಂಡಾಡಿದೆ. ಸೋಮವಾರ ರಾತ್ರಿ ಲಡಾಖ್ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಕರ್ನಲ್ ಸೇರಿದಂತೆ ಇಪ್ಪತ್ತು ಭಾರತೀಯ ಸೇನಾ ಸಿಬ್ಬಂದಿಗಳು ಹುತಾತ್ಮರಾಗಿದ್ದರು.
ಭಾರತದ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಅವರು ಹುತಾತ್ಮರಾದ ಭಾರತೀಯ ಸೈನಿಕರಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, ಭಾರತದಲ್ಲಿನ ಯುಎಸ್ ಮಿಷನ್ ಗಾಲ್ವಾನ್ ನಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪವನ್ನು ತಿಳಿಸುತ್ತದೆ. ಅವರ ಧೈರ್ಯವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಕೂಡ ಹುತಾತ್ಮರಾದ ಭಾರತದ ಸೈನಿಕರಿಗೆ ಸಂತಾಪ ಸೂಚಿಸಿದ್ದಾರೆ.
ತಮ್ಮ ಕರ್ತವ್ಯ ದ ಸಮಯದಲ್ಲಿ ಪ್ರಾಣವನ್ನೇ ಅರ್ಪಿಸಿದ ಭಾರತೀಯ ಸೈನಿಕರ ದುಃಖತಪ್ತ ಕುಟುಂಬಗಳಿಗೆ ಮತ್ತು ಭಾರತಕ್ಕೆ ನಮ್ಮ ಹೃತ್ಪೂರ್ವಕ ಸಂತಾಪ ಎಂದು ಫ್ರೆಂಚ್ ರಾಯಭಾರಿ ಲೆನೈನ್ ಟ್ವೀಟ್ ಮಾಡಿದ್ದಾರೆ.
ಭಾರತ – ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಚೀನಾದ ಸುಮಾರು 40 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.