ನವದೆಹಲಿ: ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನ ಖಂಡಿಸಿ ಕರೆ ನೀಡಿದ್ದ ಮುಷ್ಕರವನ್ನು ವೈದ್ಯರು ಕೈಬಿಟ್ಟಿದ್ದಾರೆ.ಗೃಹ ಸಚಿವ ಅಮಿತ್ ಶಾ ನಡೆಸಿದ ಸಂಧಾನ ಸಭೆ ಬಳಿಕ ವೈದ್ಯರು, ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ದೇಶದಾದ್ಯಂತ ಡಾಕ್ಟರ್ಸ್ ಮೇಲೆ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸುತ್ತಿರುವುದನ್ನು ಖಂಡಿಸಿ ಇಂದು ರಾತ್ರಿ 9 ಗಂಟೆಗೆ ಮೇಣದ ಬತ್ತಿ ಹೊತ್ತಿಸಿ ಪ್ರತಿಭಟನೆ ನಡೆಸಲು ವೈದ್ಯರು ಮುಂದಾಗಿದ್ದರು. ಜೊತೆಗೆ ನಾಳೆ ಎಲ್ಲ ವೈದ್ಯರು ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಕರಾಳ ದಿನ ಆಚರಿಸಲು ಸಜ್ಜಾಗಿದ್ದರು.
ಈ ಹಿನ್ನೆಲೆಯಲ್ಲಿಂದು ಭಾರತೀಯ ವೈದ್ಯಕೀಯ ಸಂಘ ಹಾಗೂ ವೈದ್ಯರ ಜೊತೆ ಅಮಿತ್ ಶಾ, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು. ಸರ್ಕಾರ ಸದಾ ನಿಮ್ಮೊಂದಿಗಿರುತ್ತದೆ, ಯಾವುದೇ ಕಾರಣಕ್ಕೂ ಸಾಂಕೇತಿಕ ಪ್ರತಿಭಟನೆ ನಡೆಸದಂತೆ ಅಮಿತ್ ಶಾ ಮನವಿ ಮಾಡಿದ್ರು. ಅಲ್ಲದೇ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದರು.
ಈ ಹಿನ್ನೆಲೆ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ಪ್ರತಿಭಟನೆಯನ್ನು ಹಿಂಪಡೆದುಕೊಂಡಿದೆ.








