ಸಂಪುಟ ವಿಸ್ತರಣೆಗೆ ಶಾ ಕೊಡ್ತಾರಾ ಸಿಗ್ನಲ್..!
ಬೆಂಗಳೂರು: 2019ರ ಲೋಕಸಭೆ ಚುನಾವಣಾ ಪ್ರಚಾರ ಹಾಗೂ ಆಪರೇಷನ್ ಕಮಲದ ಮೂಲಕ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬಳಿಕವೂ ಕರ್ನಾಟಕಕ್ಕೆ ಆಗಮಿಸದ ಬಿಜೆಪಿ ಚಾಣಾಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಕ್ರಾಂತಿ ಬಳಿಕ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಬಿಜೆಪಿ “ಜನಸೇವಕ ಸಮಾವೇಶ” ಹಮ್ಮಿಕೊಂಡಿದ್ದೆ. ಜನವರಿ 11ರಿಂದ 13ರವರೆಗೆ ಸಮಾವೇಶಗಳು ನಡೆಯಲಿದ್ದು, ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ಜನವರಿ 16 ಅಥವಾ 17ರಂದು ನಡೆಯಲಿದೆ. ಸಮಾರೋಪ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ.
ಸಂಪುಟ ವಿಸ್ತರಣೆಗೆ ಶಾ ಕೊಡ್ತಾರಾ ಸಿಗ್ನಲ್..!
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಳೆದ ಒಂದು ವರ್ಷದಿಂದ ಮುಂದಕ್ಕೆ ಹೋಗುತ್ತಲೇ ಇದೆ. ಸಂಪುಟ ವಿಸ್ತರಣೆಗೆಂದೇ ಸಿಎಂ ಯಡಿಯೂರಪ್ಪ ಪಟ್ಟಿ ಹಿಡಿದುಕೊಂಡು ಎರಡು ಬಾರಿ ದೆಹಲಿಗೆ ಹೋದಾಗಲೂ ಅಮಿತ್ ಶಾ ಸಿಕ್ಕಿರಲಿಲ್ಲ. ಹಲವು ಬಾರಿ ಸಂಪುಟ ವಿಸ್ತರಣೆಗೆ ಬಿಎಸ್ವೈ ನಡೆಸುತ್ತಿರುವ ಕಸರತ್ತಿಗೆ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಡುತ್ತಿಲ್ಲ. ಒಂದು ಕಡೆ, ವಲಸೆ ಬಂದು ಸರ್ಕಾರ ರಚನೆ ಮಾಡಲು ಕಾರಣರಾದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು, ಮತ್ತೊಂದೆಡೆ, ಬಿಜೆಪಿಯಲ್ಲಿರುವ ಅತೃಪ್ತ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಒತ್ತಡ ಹೆಚ್ಚಾಗುತ್ತಿದೆ.
ಇದರ ನಡುವೆ, ಬಿ.ಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ಬಿಜೆಪಿಯಲ್ಲೇ ನಡೆಯುತ್ತಿರುವ ಬೆಳವಣಿಗೆಗಳ ಭಾಗವಾಗಿಯೇ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡುತ್ತಿಲ್ಲ. ಹೀಗಾಗಿಯೇ ಅಮಿತ್ ಶಾ, ಬಿಎಸ್ವೈ ಕೈಗೆ ಸಿಗುತ್ತಿಲ್ಲ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿವೆ. ಆದರೆ, ಅಮಿತ್ ಶಾ ಸಂಕ್ರಾಂತಿಗೆ ರಾಜ್ಯಕ್ಕೆ ಬರ್ತಾರಾ, ಬೇರೆ ನೆಪ ಹೇಳಿಕೊಂಡು ಬರುವುದಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ಜಿಲ್ಲಾ ಪ್ರವಾಸ, ಜನಸೇವಕ ಸಮಾವೇಶ
ನಳಿನ್ಕುಮಾರ್ ಕಟೀಲ್, ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಪ್ರತಾಪಸಿಂಹ ಒಳಗೊಂಡ ತಂಡವು 11ರಂದು ಮೈಸೂರು, ಚಾಮರಾಜನಗರದದಲ್ಲಿ ಜನಸೇವಕ ಸಮಾವೇಶ ನಡೆಯಲಿದೆ. 12ರಂದು ಹಾಸನ ಮತ್ತು ಮಂಡ್ಯ, 13ರಂದು ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಮಾವೇಶ ಆಯೋಜಿಸಲಾಗಿದೆ.
ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಿ.ಟಿ.ರವಿ, ಕೋಟ ಶ್ರೀನಿವಾಸ ಪೂಜಾರಿ, ಅರವಿಂದ ಲಿಂಬಾವಳಿ, ಈರಣ್ಣ ಕಡಾಡಿ, ಎನ್.ರವಿಕುಮಾರ್ ನೇತೃತ್ವದ ತಂಡ ಜ.11ರಂದು ಚಿಕ್ಕಮಗಳೂರು ಮತ್ತು ಉಡುಪಿ, 12ರಂದು ಮಡಿಕೇರಿ ಮತ್ತು ಮಂಗಳೂರು, 13ರಂದು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಮಾವೇಶ ನಡೆಸಲಿದೆ.
ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿ 3ನೇ ತಂಡ, ವಿ.ಸೋಮಣ್ಣ, ರಮೇಶ್ ಜಾರಕಿಹೊಳಿ, ತೇಜಸ್ವ್ವಿನಿ ಅನಂತಕುಮಾರ್ ಅವರ ತಂಡ ಜ.11ರಂದು ಬೆಳಗಾವಿ, ಚಿಕ್ಕೋಡಿ, 12ರಂದು ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆ, 13ರಂದು ಗದಗ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.
ಜಗದೀಶ ಶೆಟ್ಟರ್ ನೇತೃತ್ವದ ನಾಲ್ಕನೇ ತಂಡದಲ್ಲಿ ಪ್ರಲ್ಹಾದ ಜೋಷಿ, ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್, ಮಾಲೀಕಯ್ಯ ಗುತ್ತೇದಾರ್ ಇದ್ದು, ಜ.11ರಂದು ಬೀದರ್ ಮತ್ತು ಕಲಬುರ್ಗಿ, 12ರಂದು ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ, 13ರಂದು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.
ಡಿಸಿಎಂ ಡಾ.ಅಶ್ವತ್ಥನಾರಾಯಣ ನೇತೃತ್ವದ ಇನ್ನೊಂದು ತಂಡದಲ್ಲಿ ಲಕ್ಷ್ಮಣ ಸವದಿ, ಬಿ.ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಶಿವಕುಮಾರ್ ಉದಾಸಿ ಇದ್ದು, 11ರಂದು ಹಾವೇರಿ ಮತ್ತು ದಾವಣಗೆರೆ ಜಿಲ್ಲೆ, 12ರಂದು ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆ, 13ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಮಾವೇಶ ಏರ್ಪಡಿಸಲಿದೆ ಎಂದು ಬಿಜೆಪಿ ತಿಳಿಸಿದೆ.
ಒಂದು ದೇಶ ಒಂದು ತೆರಿಗೆ, ಒಂದು ದೇಶ ಒಂದು ಪಡಿತರ ಚೀಟಿ ಅನುಷ್ಠಾನ ಆಗಿದೆ. ಒಂದು ದೇಶ ಒಂದೇ ಚುನಾವಣೆ ಕುರಿತ ಚರ್ಚೆ ವ್ಯಾಪಕವಾಗಿ ಆಗಬೇಕು. ಇದರಿಂದ ಸಂಪನ್ಮೂಲದ ಸದ್ಬಳಕೆ ಮತ್ತು ಅಭಿವೃದ್ಧಿ ಕಾರ್ಯ ಇನ್ನಷ್ಟು ವೇಗದಿಂದ ನಡೆಯಲು ಸಾಧ್ಯವಿದೆ. ಇದರ ಸಾಧಕ ಬಾಧಕಗಳ ಕುರಿತು ಚರ್ಚೆ ಅಗತ್ಯವಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel