ದೆಹಲಿಯಲ್ಲಿ ಮೂಲಸೌಕರ್ಯ ಸುಧಾರಣೆಗೆ ಕಾರಣ ಬಿಜೆಪಿ : ಅಮಿತ್ ಶಾ
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂಲಸೌಕರ್ಯ ಸುಧಾರಣೆಗೆ ಕಾರಣವೇ ಬಿಜೆಪಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೊಂಡಿದ್ದಾರೆ..
ಪಂಜಾಬಿ ಭಾಗ್ ನಲ್ಲಿ ಭಾರತ್ ದರ್ಶನ್ ಪಾರ್ಕ್ ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ ಅವರು ರಾಷ್ಟ್ರ ರಾಜಧಾನಿಯಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವಲ್ಲಿ ಕೇಂದ್ರ ಮತ್ತು ಬಿಜೆಪಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರವು 31 ಖಾಲಿ ನಿವೇಶನಗಳನ್ನು ಉದ್ಯಾನಗಳಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸಿದೆ. 27 ಒಳಚರಂಡಿ ಘಟಕಗಳನ್ನು ಅಭಿವೃದ್ಧಿ ಮಾಡಿದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ನೀವು 13,000 ಕೋಟಿ ರೂ. ಅನುದಾನ ನೀಡುತ್ತಿದ್ದರೆ, ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಬೇಕಿತ್ತು ಎಂದು ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಲ್ಲಿ ಎರಡು ರೀತಿಯ ಕೆಲಸದ ಸಂಸ್ಕೃತಿಗಳಿವೆ. ಒಂದು ವಾಸ್ತವಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಮತ್ತು ಭರವಸೆಗಳನ್ನು ಈಡೇರಿಸುವುದು. ಇನ್ನೊಂದು ಬಾಯಿ ಮಾತಿಗಷ್ಟೇ ಅಭಿವೃದ್ಧಿ ಬಗ್ಗೆ ಹೇಳಿವುದು ಎಂದು ಕೇಜ್ರಿವಾಲ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ..
ಇನ್ನೂ ಈಗಾಗಲೇ 1,731 ಕಾಲೋನಿಗಳನ್ನು ಸರಿಪಡಿಸುವಂತಹ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಇದರಿಂದ 40 ಲಕ್ಷ ಜನರಿಗೆ ಪ್ರಯೋಜನ ಆಗಲಿದೆ. ಸ್ಲಂ ಪುನರ್ವಸತಿ ಯೋಜನೆಯ ಅಡಿಯಲ್ಲಿ ಮನೆಗಳನ್ನು ಒದಗಿಸುವ ಮೂಲಕ ಸಾವಿರಾರು ಸ್ಲಂ ನಿವಾಸಿಗಳಿಗೆ ಸೂರನ್ನು ಒದಗಿಸಲಾಗುತ್ತಿದೆ. ಕತ್‌ಪುಟ್ಲಿ ಕಾಲೋನಿ, ಕಲ್ಕಾಜಿ ಮತ್ತು ಜೈಲೋರ್‌ವಾಲಾ ಬಾಗ್‌ನಲ್ಲಿರುವ 85,000 ಜನರಿಗೆ ಇದರಿಂದ ಸಾಕಷ್ಟು ಪ್ರಯೋಜವಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ..








