ರಾಜ್ಯಕ್ಕೆ ಆಗಮಿಸಿದ ಅಮಿತ್ ಶಾ | ನಾಯಕತ್ವ ಬದಲಾವಣೆಗೆ ತಿಲಾಂಜಲಿ !?
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ (ಸೋಮವಾರ) ರಾತ್ರಿ 11:50ಕ್ಕೆ ರಾಜ್ಯಕ್ಕೆ ಆಗಮಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಮಾಡಿಕೊಂಡರು.
ಒಂದು ದಿನದ ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಅಮಿತ್ ಶಾ ಅವರನ್ನು ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲು ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಪ್ರಮುಖ ನಾಯಕರು ಈ ವೇಳೆ ಉಪಸ್ಥಿತರಿದ್ದರು.
ಇಂದು ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಅಮಿತ್ ಶಾ ಮಹತ್ವದ ಸಭೆ ನಡೆಸಲಿದ್ದಾರೆ. ಕೋರ್ ಕಮಿಟಿಯ 16 ಸದಸ್ಯರು, 30 ಪದಾಧಿಕಾರಿಗಳು, ನಾಲ್ವರು ವಿಭಾಗವಾರು ಪ್ರತಿನಿಧಿಗಳು ಸೇರಿ 50 ಮಂದಿ ಪ್ರಮುಖರ ಜತೆ ಸಭೆ ನಡೆಯಲಿದೆ. ಮಧ್ಯಾಹ್ನ ಸಿಎಂ ನಿವಾಸದಲ್ಲಿ ಅಮಿತ್ ಶಾ ಅವರಿಗೆ ಭೋಜನ ಕೂಟ ಏರ್ಪಡಿಸಲಾಗಿದೆ.
ಸಿಎಂ ಬೊಮ್ಮಾಯಿ,ಅಮಿತ್ ಶಾ ಅವರೊಂದಿಗಿನ ಭೋಜನ ಕೂಟಕ್ಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರನ್ನೂ ಆಹ್ವಾನಿಸಿದ್ದಾರೆ. ಅಮಿತ್ ಶಾ ರಾಜ್ಯಕ್ಕೆ ಆಗಮಿಸಿವ ಮೊದಲೇ ಯಡಿಯೂರಪ್ಪರ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿರುವ ಬೊಮ್ಮಾಯಿ 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಇನ್ನೂ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ ಭವಿಷ್ಯದ ಚುನಾವಣೆಗೆ ಟಾಸ್ಕ್, ಸಂಘಟನೆ ಯಾವ ರೀತಿ ಮಾಡಬೇಕು, ಸರ್ಕಾರ ಮತ್ತು ಪಕ್ಷ ಹೇಗೆ ಸಾಗಬೇಕು, ವಿವಾದಗಳಿಂದ ದೂರವಿದ್ದು ಆಡಳಿತ ನಡೆಸುವ ಬಗೆ ಸೇರಿದಂತೆ ಹತ್ತು ಹಲವು ವಿಚಾರಗಳ ಕುರಿತು ಸಲಹೆ ಸೂಚನೆ ನೀಡಲಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ, ನಾಯಕತ್ವ ಬದಲಾವಣೆ ಗೊಂದಲಕ್ಕೂ ಇತಿಶ್ರೀ ಹಾಡುವ ಸಾಧ್ಯತೆ ಇದೆ.









