ದಸರಾ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಿಂದ ಮೆರವಣಿಗೆ ಮೂಲಕ ಅರಮನೆಗೆ ಅಮ್ಮನ ಉತ್ಸವ ಮೂರ್ತಿ ಆಗಮಿಸಿದೆ. ಈ ಸಂದರ್ಭದಲ್ಲಿ ಕಲಾ ತಂಡಗಳು ಮೆರಗು ನೀಡಿದವು. ಅರಮನೆ ಪ್ರವೇಶ ದ್ವಾರದಲ್ಲಿ ಭಕ್ತರು ಅದ್ಧೂರಿ ಸ್ವಾಗತದೊಂದಿಗೆ ನಾಡ ದೇವತೆ ಚಾಮುಂಡೇಶ್ವರಿ ಅಮ್ಮನನ್ನು ಬರಮಾಡಿಕೊಂಡರು.
ಜಂಬೂಸವಾರಿ ವೀಕ್ಷಿಸಲು ದೇಶ-ವಿದೇಶಗಳಿಂದ ಆಗಮಿಸಿರುವ ಪ್ರವಾಸಿಗರು, ಈಗಾಗಲೇ ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ. ಮೆರವಣಿಗೆ ಸಾಗುವ ರಸ್ತೆ ಇಕ್ಕೆಲಗಳಲ್ಲಿ ಲಕ್ಷಾಂತರ ಜನ ಜಮಾ ಆಗಿದ್ದಾರೆ. ಹೀಗಾಗಿ ಚಾಮರಾಜೇಂದ್ರ ವೃತ್ತ ಸೇರಿದಂತೆ ಮೆರವಣಿಗೆ ಮಾರ್ಗದಲ್ಲಿ ಭಾರೀ ಭದ್ರತೆ ಕಲ್ಪಿಸಲಾಗಿದೆ.
ಅರಮನೆ ಎದುರು ವಿಶಾಲವಾದ ಶಾಮಿಯಾನ ಕುರ್ಚಿಗಳನ್ನು ಹಾಕಲಾಗಿದ್ದು, ಜಂಬೂಸವಾರಿ ವೀಕ್ಷಿಸಲು 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.