“ಅಮೃತ ಅಪಾರ್ಟ್ ಮೆಂಟ್ಸ್” ನಲ್ಲಿದೆ ಬೆಂಗಳೂರಿನ EMI ಲೈಫು…!

1 min read
Amrit Apartments saaksha tv

ಊರು ಬಿಟ್ಟು ಭವಿಷ್ಯ ಕಟ್ಟಿಕೊಳ್ಳುವ ಬರವ ಕನಸುಕಂಗಳ ಯುವಕ ಯುವತಿಯರಿಗೆ ತಾಯಿಯಂತಹದ್ದು ನಮ್ಮ ಬೆಂಗಳೂರು. ಇಲ್ಲಿ ದಿನನಿತ್ಯ ಹೊಸ ಹೊಸ ಕನಸುಗಳು ಗೂಡುಕಟ್ಟಿಕೊಳ್ಳುತ್ತವೆ. ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ ಖರೀದಿಸಿ ಇಎಂಐ ಜೀವನಕ್ಕೆ ಶರಣಾಗುತ್ತವೆ. ಅಂತದ್ದೊಂದು ನವದಂಪತಿಗಳ ಇಎಂಐ ಜೀವನವನ್ನು ಎರಡು ಕೊಲೆಗಳ ಮೂಲಕ ಚಿತ್ರೀಕರಿಸಿದ ಸಿನಿಮಾ ಅಮೃತ ಅಪಾರ್ಟ್‌ಮೆಂಟ್ಸ್. ಉತ್ತರ ಭಾರತೀಯ ಬೆಂಗಾಲಿ ಬೆಡಗಿಯ ಜೊತೆ ಮದುವೆಯಾಗುವ ಕನ್ನಡಿಗನೊಬ್ಬನ ಡಿಫರೆನ್ಸ್‌ ಆಫ್‌ ಒಪೀನಿಯನ್‌ ಮೂಲಕವೇ ತೆರೆದುಕೊಳ್ಳುವ ಚಿತ್ರ, ಮೊದಲರ್ಧದಲ್ಲೇ ಡೈವೋರ್ಸ್‌ ಪಿಟಿಷನ್‌ಗೆ ಋಜು ಬೇಡುತ್ತದೆ. ಹೆಂಡತಿ ಮಾಡುವ ಎಗ್‌ ಬುರ್ಜಿಯ ವಾಸನೆ ಸಹಿಸದ ಗಂಡ ಅವಳು ತೊರೆದರ ಕಾವೇರಿಯಲ್ಲಿ ತರ್ಪಣ ಕೊಡುತ್ತೇನೆ ಎಂದರೆ ಬೆಂಗಾಲಿ ಪತ್ನಿ ಕಲ್ಕತ್ತಾ ತೆರಳಿ ಗಂಗೆಯಲ್ಲಿ ಮಿಂದು ಸಮಾಧಾನ ಪಟ್ಟುಕೊಳ್ಳುತ್ತೇನೆ ಎನ್ನುತ್ತಾಳೆ. ಮೊದಲಾರ್ಧ ಪೂರ್ತಿ ಗಂಡ ಹೆಂಡತಿಯರ ನಡುವಿನ ಕೊಸರಾಟ, ಡೈವೋರ್ಸ್‌ ಪಡೆದು ಇರಾಳವಾಗುವ ಹೆಣಗಾಟ, ಲೋನ್‌ ಕಟ್ಟದ ಸಂಕಟ, ತಮಿಳು ಕೆಲಸದವಳು, ಮಲೆಯಾಳಿ ನೆರಯವನು, ಬಿಹಾರಿ ಸೆಕ್ಯೂರಿಟಿ ಗಾರ್ಡ್‌, ಅನಾಮಿಕ ತಲೆಹರಟೆ ಆಟೋ ಡ್ರೈವರ್‌, ಕೊಲೆಯಾದ ವಸೂಲಿ ದಾಸ್‌ ಹೆಣ, ಡೈವೋರ್ಸ್‌ ತಾಪತ್ರಯದಲ್ಲಿದ್ದ ಪತಿ ಪತ್ನಿಯರಿಗೆ ಮತ್ತೊಂದು ಸಂಕಷ್ಟ, ಬ್ಲಾಕ್‌ಮೇಲ್‌ ಫೋನ್‌ ಕಾಲ್, ಇದ್ದಕ್ಕಿದ್ದ ಹಾಗೇ ನೇಣು ಹಾಕಿಕೊಳ್ಳುವ ಅಪಾರ್ಟ್‌ಮೆಂಟ್‌ ಸೆಕ್ಯೂರಿಟಿ ಗಾರ್ಡ್‌ ಹೀಗೆ ಸಾಗುತ್ತದೆ. ಎರಡು ಕೊಲೆ ಮಾಡಿದವರಾರು ಅನ್ನುವ ಕುತೂಹಲದೊಂದಿಗೆ ಇಂಟರ್‌ವೆಲ್‌ ತೆಗೆದುಕೊಂಡರೂ ಮೊದಲಾರ್ಧ ತೀರಾ ನಿಧಾನಗತಿಯಲ್ಲಿ ಸಾಗುತ್ತದೆ.

ಆದರೆ ಉತ್ತರಾರ್ಧದ ವೇಗ ಮಾತ್ರ ಪ್ರೇಕ್ಷಕರ ಅಂದಾಜು ಮೀರಿ ದೌಡಾಯಿಸುತ್ತದೆ. ಆಟೋ ಡ್ರೈವರ್‌ ಲಕ್ಕಪ್ಪ ಗೌಡರ ಹೊಸ ಅವತಾರ ಅಚ್ಚರಿ ಮೂಡಿಸುತ್ತದೆ. ಅಮೃತಾ ಅಪಾರ್ಟ್‌ಮೆಂಟ್ಸ್‌ನ ಎರಡು ಕೊಲೆಗಳು ಹೇಗಾಯಿತು ಎಂದು ವಿವರಿಸುವ ಲಕ್ಕಪ್ಪಗೌಡ ಊಹೆಗೆ ನಿಲುಕದ ಅಪರಾಧಿಯನ್ನು ತೋರಿಸುತ್ತಾನೆ. ಒಂದು ಅಪಾರ್ಟ್‌ಮೆಂಟ್‌ ಏನೆಲ್ಲಾ ನಡೆಯಬಹುದೋ ಅದೆಲ್ಲವೂ ಅಲ್ಲಿ ನಡೆಯುತ್ತದೆ. ಪಾತಕ ಲೋಕ ಹೇಗೆ ವ್ಯವಹರಿಸುತ್ತದೆ ಮತ್ತು ಸಂದರ್ಭಕ್ಕೆ ತಕ್ಕಂತೆ ಅದು ಹೇಗೆ ವರ್ತಿಸುತ್ತದೆ ಅನ್ನುವ ಲಕ್ಕಪ್ಪಗೌಡನ ಕ್ಯಾಲ್ಕುಲೇಷನ್‌ ಚಿತ್ರದ ಹೈಲೈಟ್ಸ್. ಹಾಗೆ ನೋಡುವುದಾದರೆ ಚಿತ್ರದ ನಾಯಕ ತಾರಕ್‌ಗಿಂತ ಹೆಚ್ಚಿನ ಅಟೆನ್ಷನ್‌ ಲಕ್ಕಪ್ಪಗೌಡನ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡ ಬಾಲಾಜಿ ಮನೋಹರ್‌ಗೆ ಸಿಕ್ಕಿದೆ. ಹಾಗೊಂದು ಹೀಗೊಂದು ದೃಶ್ಯದಲ್ಲಿ ಬಂದು ಹೋದರೂ ಮಾನಸ ಜೋಶಿ ಮತ್ತು ಸೀತಾ ಕೋಟೆ ಅಭಿನಯ ಅಚ್ಚುಕಟ್ಟಾಗಿದೆ. ಬಹುತೇಕ ಹೊಸಬರೇ ಅಭಿನಯಿಸಿರುವ ಚಿತ್ರ ಒಂದು ಸಲ ಮನೆ ಮಂದಿ ಕುಳಿತು ನೋಡಲು ಮೋಸವಿಲ್ಲ. ನಿಜವಾದ ಕೇರಿಂಗ್‌ ಎಂದರೆ ತಿಂಗಳಿಗೆ ಒಂದಷ್ಟು ಹಣ ಕಳಿಸಿಬಿಡುವುದಲ್ಲ, ವೃದ್ಧಾಪ್ಯದಲ್ಲಿ ಅವರ ಜೊತೆ ನಾನಿದ್ದೇನೆ ಎಂದು ನಿಲ್ಲುವುದು ಎನ್ನುವ ಕಥಾನಾಯಕನ ಸಂಭಾಷಣೆ ಈ ಜನರೇಷನ್‌ ಯುವಕರಿಗೆ ಮೆಸೆಜ್‌ ಒಂದನ್ನು ನೀಡುತ್ತದೆ. ಎರಡು ಮನಸುಗಳು ಬೆರೆಯಲು ಪ್ರೀತಿ ಮಾತ್ರವೇ ಬೇಕು ಹೊರತು ಇಎಂಐನಲ್ಲಿ ಖರೀದಿಸುವ ಫ್ಲಾಟ್‌, ಕಾರು, ಟಿವಿ, ಸೋಫಾ, ಫ್ರಿಡ್ಜ್‌ ಅಲ್ಲ ಅನ್ನುವುದು ಅರಿವಾದಾಗ ಮಾತ್ರ ಯಾವ ದಾಂಪತ್ಯವೂ ಮುರಿದುಹೋಗುವುದಿಲ್ಲ ಅನ್ನುವುದು ಅರ್ಥವಾದರೆ ಚಿತ್ರತಂಡದ ಶ್ರಮ ಸಾರ್ಥಕವಾಗುತ್ತದೆ.

ಅಮೃತಾ ಅಪಾರ್ಟ್‌ಮೆಂಟ್ಸ್‌ ಗುರುರಾಜ್‌ ಕುಲಕರ್ಣಿ ನಾಡಗೌಡರ ಚೊಚ್ಚಲ ನಿರ್ದೇಶನದ ಚಿತ್ರ. ಚಿತ್ರದ ಹಾಡುಗಳಿಗೆ ಕೊಟ್ಟಷ್ಟು ಗಮನವನ್ನು ಸಂಭಾಷಣೆಗೂ ಕೊಟ್ಟಿದ್ದರೇ ಚಿತ್ರ ಇನ್ನಷ್ಟು ಅದ್ಭುತವಾಗಿ ಮೂಡಿಬರುತ್ತಿತ್ತು. ಮೊದಲರ್ಧ ತೀರಾ ನಿಧಾನವಾಗಿ ಚಲಿಸುವ ಕಥೆ ಸೆಕೆಂಡ್‌ ಹಾಫ್‌ನಲ್ಲಿ ಅಕ್ಷರಶಃ ಓಡಿಸಿಕೊಂಡು ಹೋಗುತ್ತದೆ. ಇಡೀ ಚಿತ್ರದಲ್ಲಿ ಬಾಲಾಜಿ ಮನೋಹರ್‌ ಅಭಿನಯ ಮತ್ತು ಮ್ಯಾನರಿಸಂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಆದರೆ ಸ್ಕ್ರೀನ್‌ ಪ್ಲೇ ಅನ್ನು ಇನ್ನಷ್ಟು ಹರಿತ ಮಾಡಬಹುದಿತ್ತು. ಮಾನಸ ಜೋಶಿ ಮತ್ತು ಸಂಪತ್‌ ಅವರ ಪಾತ್ರ ಪೋಷಣೆ ಇನ್ನಷ್ಟು ವೃದ್ಧಿಸಬೇಕಿತ್ತು, ಫಸ್ಟ್‌ ಹಾಫ್‌ನಲ್ಲಿ ಒಂದಷ್ಟು ಕುತೂಹಲವನ್ನು ಉಳಿಸಿ ಮುಂದಕ್ಕೆ ಕೊಂಡೊಯ್ಯಬೇಕಿತ್ತು ಅನ್ನುವುದು ಗಮನಿಸಬೇಕಾದ ಅಂಶಗಳು. ಉಳಿದಂತೆ ನಾವು ಬಂದೇವಾ ಗೀಗೀಪದ ಮತ್ತು ಬೆಂಗಾಲಿ ಹಾಡಿನ ಪ್ರಯತ್ನ ನಿಜಕ್ಕೂ ಉತ್ತಮವಾಗಿದೆ.

-ವಿಶ್ವಾಸ್‌ ಭಾರದ್ವಾಜ್‌

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd