ಕೋಲಾರ : ಇದುವರೆಗೂ ಉತ್ತರ ಭಾರತದ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದ್ದ ದೈತ್ಯ ಮಿಡತೆಗಳ ಕಾಟ ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ದೈತ್ಯ ಮಿಡತೆಗಳ ದಂಡು ಚಿನ್ನದ ನಾಡು ಕೋಲಾರಕ್ಕೂ ಕಾಲಿಟ್ಟಿದ್ದು, ರೈತರ ನಿದ್ದೆಗೆಡಿಸಿದೆ.
ಕೋಲಾರ ತಾಲೂಕಿನ ಬಿಂಬ ಮತ್ತು ದೊಡ್ಡಹಸಾಳ ಗ್ರಾಮಗಳಲ್ಲಿ ರಾತ್ರೋರಾತ್ರಿ ಸಾವಿರಾರು ಮಿಡತೆಗಳು ಗ್ರಾಮಗಳ ಹೊರವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸುತ್ತಮುತ್ತಲಿನ ಗಿಡ-ಮರಗಳು ಹಾಗೂ ವಿದ್ಯುತ್ ಕಂಬಗಳ ಮೇಲೆ ಆಶ್ರಯ ಪಡೆದಿವೆ. ಸದ್ಯ ಗ್ರಾಮಗಳ ಹೊರವಲಯದಲ್ಲಿರುವ ಗಿಡ-ಮರಗಳನ್ನು ನಾಶಪಡಿಸುತ್ತಿರುವ ಈ ಮಿಡತೆಗಳು ಯಾವುದೇ ಸಂದರ್ಭದಲ್ಲಿ ತೋಟಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಿಂಬ ಮತ್ತು ದೊಡ್ಡಹಸಾಳ ಗ್ರಾಮದ ಯುವಕರು ಮಿಡತೆಗಳಿರುವ ಗಿಡ-ಮರಗಳನ್ನು ಸುಟ್ಟುಹಾಕುತ್ತಿದ್ದಾರೆ.
ಬೆಂಗಳೂರಿನತ್ತ ಮಿಡತೆ ಸೈನ್ಯ
ನೆರೆ ಆಂಧ್ರದಿಂದ ದಾಂಗುಡಿ ಇಟ್ಟಿರುವ ಈ ಮಿಡತೆಗಳು ಕೋಲಾರವಲ್ಲದೆ ಚಿಕ್ಕಬಳ್ಳಾಪುರ ಹಾಗೂ ರಾಜಧಾನಿ ಬೆಂಗಳೂರಿಗೂ ಬರುವ ಸಾಧ್ಯತೆಗಳಿವೆ. ಈಗಾಗಲೇ ಗುಡಿಬಂಡೆ, ಕೈವಾರ ಮತ್ತಿತರ ಪ್ರದೇಶಗಳಲ್ಲಿ ಮಿಡತೆ ಹಾವಳಿ ಮಿತಿಮೀರಿದ್ದು, ಯಲಹಂಕದ ಮೂಲಕ ರಾಜಧಾನಿ ಮೇಲೂ ದೈತ್ಯ ಮಿಡತೆ ಸೈನ್ಯ ದಾಳಿ ಮಾಡಲಿದೆ ಎಂದು ಹೇಳಲಾಗುತ್ತಿದೆ.








