‘ನೀನೇ ನಿನ್ನ ಮಗುವಾಗಿ ನಮ್ಮ ಮಡಿಲಿಗೆ ಬಂದ್ಬಿಡು ಕಂದ’
ಯಾವಾಗ್ಲೂ ನೀನು ನಮ್ಮ ಮನಸ್ಸಲ್ಲಿ, ಹೃದಯದಲ್ಲಿ ಇರ್ತಿಯ ಕಂದ
ಕಣ್ಣು ಮುಚ್ಚಿದ್ರು ನೀನೆ, ಕಣ್ಣು ತೆರೆದ್ರು ನೀನೆ, ನಿನ್ನ ನಗು ಮುಖ
ಚಿರುವಿಗೆ ಅರ್ಜುನ್ ಸರ್ಜಾ ಭಾವನಾತ್ಮಕ ನುಡಿನಮನ
ಬೆಂಗಳೂರು: ಸ್ಯಾಂಡಲ್ ವುಡ್ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ತಮ್ಮನ್ನ ಅಗಲಿ ಇಂದಿಗೆ 11 ದಿನ ಕಳೆದಿದೆ. ಈ ಹಿನ್ನೆಲೆ ಸರ್ಜಾ ಕುಟುಂಬದವರು ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಪೂಜೆ ಸಲ್ಲಿಸಿದರು. ಏತನ್ಮಧ್ಯೆ ನಟ ಅರ್ಜುನ್, ಚಿರುನಾ ಮರೆಯೋಕೆ ಆಗದೇ ಮನದಾಳದ ಮಾತುಗಳನ್ನು ಪತ್ರದ ಮೂಲಕ ಬಿಚ್ಚಿಟ್ಟಿದ್ದಾರೆ. ಈ ಮೂಲಕ ಅರ್ಜುನ್ ಸರ್ಜಾ ಚಿರುವಿಗೆ ಭಾವನಾತ್ಮಕ ನುಡಿನಮನ ಸಲ್ಲಿಸಿದ್ದಾರೆ.
ಮನೆ ಮಗನಿಗೆ ಮನವಿ
ಚಿನ್ನ ಮಗನೇ,
ನಿನ್ನ ಮನ್ಸಿಗೆ ಯಾರಾದ್ರೂ ಬೇಜಾರು ಮಾಡಿದ್ರೆ, ನೀನು ಕೋಪ ಮಾಡ್ಕೊಂಡು ಸ್ವಲ್ಪ ಮಾತಾಡ್ದಿದ್ರು, ನಮ್ಮನ್ನ ಬೈಕೊಂಡಿದ್ರು, ನಮಗೆ ಹೇಳ್ದೆ ಯಾವ್ದಾರು ಊರಿಗೆ ಹೋಗಿ ಬಂದಿದ್ರು ಪರವಾಗಿರ್ತಿರ್ಲಿಲ್ಲ. ಆದ್ರೆ ವಾಪಸ್ಸೇ ಬರಕ್ಕಾಗ್ದಿರೋ ಅಂತ ಊರಿಗೆ ಹೋಗಿ ನಮ್ಗೆಲ್ಲ ಇಂತ ಶಿಕ್ಷೆ ಕೊಟ್ಬಿಟ್ಟಲ್ಲಪ್ಪ.
ಕಣ್ಣು ಮುಚ್ಚಿದ್ರು ನೀನೆ, ಕಣ್ಣು ತೆರೆದ್ರು ನೀನೆ, ನಿನ್ನ ನಗು ಮುಖ. ಸರಿ ಸ್ವಲ್ಪ ದಿನ ಆದ್ಮೇಲೆ ಮರ್ತುಬಿಡ್ತಾರೆ ಅಂತ ನೀನು ತಿಳ್ಕೊಂಡಿದ್ರೆ ಅದು ಸುಳ್ಳು. ನಮ್ಮೆಲ್ಲರಿಗೂ ಇದು ದೊಡ್ಡ ಗಾಯ, ಆರದೇ ಇರೋ ಅಂತ ಗಾಯ. ಯಾವಾಗ್ಲೂ ನೀನು ನಮ್ಮ ಮನಸ್ಸಲ್ಲಿ, ಹೃದಯದಲ್ಲಿ ಇರ್ತಿಯ ಕಂದ.
ನಿನ್ನ ತಾತ ನಿಂಗೆ ಚಿರಂಜೀವಿ ಅಂತ ಹೆಸರಿಟ್ರು. ಅದ್ಯಾವತ್ತು ಸುಳ್ಳಾಗಲ್ಲ. ನಿನ್ನ ಮಾತು, ನಿನ್ನ ಚಿರುನಗು, ನಿನ್ನ ನೆನಪು, ನಮ್ಮ ಸಂಬಂಧ ಯಾವಾಗ್ಲೂ ಚಿರಂಜೀವಿಯಾಗೇ ಇರುತ್ತೆ ಬಂಗಾರ.
ಚಿರು, ಎಲ್ರು ಹೇಳ್ತಾರೆ ಈ ನೋವನ್ನ ತಡ್ಕೊಳ್ಳೋ ಶಕ್ತಿ ಆ ದೇವರು ನಿಮ್ಮ ಇಡೀ ಕುಟುಂಬಕ್ಕೆ ಕೊಡ್ಬೇಕು ಅಂತ. ಆದ್ರೆ ಅದು ನಿನ್ನ ಕೈಯಲ್ಲೇ ಇದೆ. ಹೇಗೆ ಅಂದ್ರೆ, ನೀನೇ ನಿನ್ನ ಮಗುವಾಗಿ ನಮ್ಮ ಮಡಿಲಿಗೆ ಬಂದ್ಬಿಡು ಕಂದ. ಆ ಮಗು ನಗುವಿನಲ್ಲೇ ನಿನ್ನ ನೋಡ್ತೀವಿ please. We miss you and Love you so much ಎಂದು ಅರ್ಜುನ್ ಸರ್ಜಾ ಇಡೀ ಕುಟುಂಬದ ಪರವಾಗಿ ಪತ್ರದ ಮೂಲಕ ಚಿರುವಿಗೆ ನಮನ ಸಲ್ಲಿಸಿದ್ದಾರೆ.








