ಉಡುಪಿ: ವೃದ್ಧೆಯೊಬ್ಬರು ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಪಿ.ಯಶೋಧಾ ನಾರಾಯಣ ಉಪಾಧ್ಯ (83) ಸಾವನ್ನಪ್ಪಿದ ವೃದ್ಧೆ. ಅವರು ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರ ನಿವಾಸಿ. ಚಡಗರ ಅಗ್ರಹಾರದ ನಿವಾಸಿ. ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿಯಾಗಿರುವ ಅವರು, ತನ್ನ ಜೀವನದಲ್ಲಿ ಬಂದಿದ್ದ ಎಲ್ಲ ಚುನಾವಣೆಗಳಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು.
ಈ ಸಲ ಹಿರಿಯ ನಾಗರಿಕರಿಗೆ ನೀಡಿದ ಹಕ್ಕು ಬಳಸಿಕೊಂಡಿದ್ದರು. ಹೀಗಾಗಿ ಮನೆಯಿಂದಲೇ ಮತದಾನ ಮಾಡಿದ್ದರು. ಅವರಿಗೆ ಬೆಳಿಗ್ಗೆಯಿಂದ ಎದೆನೋವು ಕಾಣಿಸಿಕೊಂಡಿದೆ. ಮತದಾನ ಮಾಡಿದ ನಂತರ ಆಸ್ಪತ್ರೆಗೆ ತೆರಳುವುದಾಗಿ ಕೂಡ ಮನೆಯವರಿಗೆ ಹೇಳಿದ್ದಾರೆ. ಮನೆಯವರು ಕೂಡ ಮತ ಪ್ರಕ್ರಿಯೆ ಮುಗಿದ ನಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.