ಮಡಿಕೇರಿ : ಇತ್ತೀಚೆಗೆ ಚುನಾವಣಾ (Election) ಆಯೋಗವು ಕೊಡಗಿನಲ್ಲಿ ಚುನಾವಣೆ ಮುಗಿಯುವವರೆಗೂ ಸಮಾರಂಭಗಳಲ್ಲಿ ಮದ್ಯ (Alcohol) ಬಳಕೆ ಮಾಡಬಾರದು ಎಂದು ಹೇಳಿತ್ತು. ಆದರೆ, ಜನರು ಮದ್ಯ ಬಳಕೆ ಮಾಡಲು ಅವಕಾಶ ಕಲ್ಪಿಸುವಂತೆ ಆಯೋಗಕ್ಕೆ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಖಾಸಗಿ ಸಮಾರಂಭಗಳಲ್ಲಿ ಮದ್ಯ ಬಳಕೆ ಮಾಡಲು ಅವಕಾಶ ನೀಡುವಂತೆ ರಾಜ್ಯದ ಎಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ರಾಜ್ಯ ಜಂಟಿ ಚುನಾವಣಾಧಿಕಾರಿ ಸೂಚನೆ ನೀಡಿದೆ.
ಕೊಡಗಿನಲ್ಲಿ ಮದುವೆ, ನಾಮಕರಣ ಸೇರಿದಂತೆ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಲು ನಿರ್ಬಂಧ ಹೇರಿದ್ದರ ಕುರಿತು ಚುನಾವಣಾಧಿಕಾರಿಗಳಿಗೆ ಕೊಡವ ಸಮಾಜ, ಗೌಡ ಸಮಾಜ ಸೇರಿದಂತೆ ವಿವಿಧ ಸಮಾಜಗಳಿಂದ ದೂರು ಸಲ್ಲಿಸಲಾಗಿತ್ತು. ಬಿಜೆಪಿಯಿಂದ (BJP) ಕಿಲನ್ ಗಣಪತಿ ಎಲ್ಲಾ ಸಂಸ್ಥೆಗಳ ಪರವಾಗಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ನಿರ್ಬಂಧ ಸಡಿಲಿಸಿ ಅಧಿಕಾರಿಗಳು ಆದೇಶ ಹೊರಡಿಸಲಾಗಿದೆ.
ರಾಜಕೀಯ ಪಕ್ಷಗಳಿಂದ ಅಥವಾ ರಾಜಕಾರಣಿಗಳಿಂದ ನಡೆಯುವ ಸಭೆ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಬಾರದು. ಉಳಿದಂತೆ ಚುನಾವಣಾ ನೀತಿ ಸಂಹಿತೆಗೆ ಅನುಗುಣವಾಗಿ ಎಂದಿನಂತೆ ಮದ್ಯ ಸರಬರಾಜಿಗೆ ಅನುಮತಿ ನೀಡಬಹುದು ಎಂದು ಆಯೋಗ ಆದೇಶ ಹೊರಡಿಸಿದೆ.
ಕೊಡಗಿನಲ್ಲಿ ಮದುವೆ ಸಮಾರಂಭಗಳಲ್ಲಿ ಮದ್ಯ ಸೇವಿಸುವುದು ಅವರ ಸಂಸ್ಕೃತಿಯ ಒಂದು ಭಾಗ. ಪ್ರಸ್ತುತ ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗಿರುವುದರಿಂದ ಸಮಾರಂಭಗಳಲ್ಲಿ ಮದ್ಯದ ವ್ಯವಸ್ಥೆ ಮಾಡಬಾರದು ಎಂದು ಚುನಾವಣಾ ಆಯೋಗವು ಆದೇಶ ಹೊರಡಿಸಿತ್ತು. ಈಗ ಈ ಆದೇಶ ಹಿಂಪಡೆಯುವ ಮೂಲಕ ಜನರಿಗೆ ಸಿಹಿ ಸುದ್ದಿ ನೀಡಿದೆ.








