ಚೀನಿಯರ ಪ್ರಾಚೀನ ಉಗಿಬಂಡಿ ಕಥೆ: Marjala manthana Chinese steamboat
ಹಚ್ಚಹಳೆಯ ಉಗಿಬಂಡಿಯನ್ನೂ ಇನ್ನೂ ಚಲಾಯಿಸುತ್ತಿದ್ದಾರೆ ಚೀನೀಗಳು. ಹೋಗುವ ಹಾದಿಯಲ್ಲಿ ಅನನ್ಯ ಸೌಂದರ್ಯದ ಸವಿ ಉಣಬಡಿಸುವ ಪ್ರಾಚೀನ ಲೋಕೋಮೋಟೀವ್ ಎಂಜಿನ್ ಕಥೆ ಗೊತ್ತಾ? ಬುಲೆಟ್ ಟ್ರೈನ್ಗಳ ಭರಾಟೆಯ ನಡುವೆಯೂ ಸದ್ದು ಮಾಡ್ತಿದೆ 6 ದಶಕಗಳ ಹಿಂದಿನ ಚೀನಿಯರ ಕಲ್ಲಿದ್ದಲು ರೈಲು. Marjala manthana Chinese steamboat
ಚೀನಿಯರು ನಂಬಿಕೆಗೆ ಅರ್ಹರಲ್ಲ. ಚೀನಾದ ವಸ್ತುಗಳು ನಂಬಿಕೆಗೆ ಯೋಗ್ಯವಲ್ಲ. ಚೀನಾ ಉಳಿದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ವಿರುದ್ಧ ಮೋಸದ ಯುದ್ಧ ಮಾಡುತ್ತಿದೆ. ಇಂತಹ ಅನೇಕ ಸಂಗತಿಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಆಗಾಗ ಬರುತ್ತಿರುತ್ತವೆ. ಆದ್ರೆ ಅದೇ ಚೀನಾ ತನ್ನ ನಾಗರೀಕತೆ ಬೆಳೆದು ಬಂದ ಹೆಜ್ಜೆ ಜಾಡನ್ನು ಹೇಗೆ ಉಳಿಸಿಕೊಂಡು ಲಾಭದಾಯಕವಾಗಿಸಿಕೊಂಡಿದೆ ಗೊತ್ತಾ?
ಏಷ್ಯಾದಲ್ಲಿ ಸದ್ಯ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಭಲ್ಯ ಸಾಧಿಸುತ್ತಿರುವ ರಾಷ್ಟ್ರ ಚೀನಾ. ಚೀನಾದ ರೈಲ್ವೇ, ಜಗತ್ತಿನ ಪ್ರಮುಖ ಸಾರಿಗೆ ವ್ಯವಸ್ಥೆಗಳಲ್ಲೊಂದು. ಅತ್ಯಾಧುನಿಕ ರೈಲ್ವೇ ವ್ಯವಸ್ಥೆ, ಹೈಸ್ಪೀಡ್ ರೈಲು, ಬುಲೆಟ್ ಟ್ರೈನ್ಗಳನ್ನು ಹೊಂದಿದ್ದರೂ ತನ್ನ ಗತದ ರೈಲ್ವೇ ಇತಿಹಾಸ ಸಂರಕ್ಷಣೆಯನ್ನು ಚೀನಾದ ಸರ್ಕಾರ ಮರೆತಿಲ್ಲ. ಹೀಗಾಗಿ ಅಲ್ಲಿನ ಹಳೆಯ ಉಗಿಬಂಡಿ ಅಥವಾ ಲೋಕೋಮೋಟೀವ್ ಸ್ಟೀಮ್ ಎಂಜಿನ್ಗಳು ಈಗಲೂ ಚಾಲನೆಯಲ್ಲಿವೆ. ಚೀನಾದ ಪ್ರವಾಸೋದ್ಯಮ ಇಲಾಖೆ, ತನ್ನ ಪ್ರವಾಸಿಗರಿಗೆ ಈ ಹಳೆಯ ಕಲ್ಲಿದ್ದಲು ಎಂಜಿನ್ಗಳ ಮೂಲಕ ಪ್ರವಾಸಿ ಕ್ಷೇತ್ರಗಳ ದರ್ಶನ ಮಾಡಿಸುತ್ತಿದೆ.
ಜಿಯಾಂಗ್ ಸ್ಟೀಮ್ ಟ್ರೈನ್, ಸಿಚುವಾನ್ ಪ್ರಾಂತ್ಯದಲ್ಲಿ ಈಗಲೂ ಸಂಚರಿಸುವ ಚೀನಾದ ಪ್ರಾಚೀನ ಸ್ಟೀಮ್ ಎಂಜಿನ್ಗಳಲ್ಲೊಂದು. ಕಲ್ಲಿದ್ದಲು ಈಗಲೂ ಈ ಉಗಿಬಂಡಿಯ ಇಂದನ. 1959ರಿಂದ ಚಾಲನೆ ಆರಂಭಿಸಿದ್ದ ಈ ಸ್ಟೀಮ್ ಎಂಜಿನ್ ಈಗಲೂ ಚಲಿಸುತ್ತಲೇ ಇದೆ. ಈ ಉಗಿಬಂಡಿಯ ಸಂಚಾರ ಅಂದ್ರೆ ಪ್ರವಾಸಿಗರಿಗೆ ಎಲ್ಲಿಲ್ಲದ ಆನಂದ ಹಾಗೂ ಉತ್ಸಾಹ. ಯಾಕಂದ್ರೆ ಇದು ಸಂಚರಿಸುವ ಮಾರ್ಗದ ಮಧ್ಯೆ ಹಲವಾರು ರಮ್ಯ ಮನೋಹರ, ಪ್ರಕೃತಿಯ ದೃಶ್ಯ ಕಾವ್ಯ ನೋಡುಗರ ಕಣ್ಣಿಗೆ ಹಬ್ಬ ಉಂಟುಮಾಡುತ್ತೆ.
1938ರಲ್ಲಿ ಸಿಚುವಾನ್ ಪ್ರಾಂತ್ಯದ ಬಾಜಿಯಾಗೌನಲ್ಲಿ ಮೊದಲ ಸೈನೋ-ಬ್ರಿಟೀಶ್ ಕಲ್ಲಿದ್ದಲು ಗಣಿಗಾರಿಕೆ ಶುರುವಾಯ್ತು. ಬಾಜಿಯಾಗೌವ್ನಿಂದ ಶಿಕ್ಸಿ ಪಟ್ಟಣಕ್ಕೆ ಕಲ್ಲಿದ್ದಲು ಸಾಗಾಣಿಕೆಗೆ 1958ರಲ್ಲಿ ಕಾಮಗಾರಿ ಮುಗಿಸಿ ಮರುವರ್ಷವೇ ಈ ಸ್ಟೀಮ್ ಎಂಜಿನ್ ಚಾಲನೆ ಪ್ರಾರಂಭಗೊಳಿಸಲಾಯ್ತು. 1960ರ ವರೆಗೆ ಕಲ್ಲಿದ್ದಲನ್ನು ಹೊತ್ತೊಯ್ದ ಈ ಉಗಿಬಂಡಿ, ಆ ಬಳಿಕ ಪ್ರಯಾಣಿಕರ ಸಂಚಾರಕ್ಕೆ ತೆರೆದುಕೊಂಡಿತು. ಈಗಲೂ ಸಿಚುವಾನ್ ಪ್ರಾಂತ್ಯದ ಅನೇಕ ಹಳ್ಳಿಗಳ ಪ್ರಮುಖ ಸಂಚಾರ ವ್ಯವಸ್ಥೆ ಈ ಸ್ಟೀಮ್ ಎಂಜಿನ್.
ಈ ಜಿಯಾಂಗ್ ನ್ಯಾರೋ ಗೇಜ್ ಸ್ಟೀಮ್ ಎಂಜಿನ್, ಕ್ಯೂಯಾನ್ವೈನ ಪಶ್ಚಿಮಕ್ಕೆ 20 ಕಿಲೋ ಮೀಟರ್ ಚಲಿಸುತ್ತದೆ ಹಾಗೂ ಲೇಶಾನ್ನ ಬೃಹತ್ ಬುದ್ಧ ಪ್ರತಿಮೆಯನ್ನು ದರ್ಶಿಸಿ ಬರುತ್ತದೆ. 18ನೇ ಶತಮಾನದ ಚೀನಾದ ಕೈಗಾರಿಕಾ ಕ್ರಾಂತಿಯ ಅದ್ಭುತ ಸಂಶೋಧನೆ ಎಂದೇ ಇದನ್ನು ಗುರುತಿಸಲಾಗುತ್ತದೆ. ಜಿಯಾಂಗ್ ಕಲ್ಲಿದ್ದಲು ಪ್ರದೇಶದಿಂದ ಲೇಶಾನ್ ಪಟ್ಟಣದವರೆಗಿನ ಈ ಉಗಿಬಂಡಿಯ ಜರ್ನಿಯನ್ನು ಚೀನಾದ ಅನೇಕರು ಇಷ್ಟಪಡುತ್ತಾರೆ. ಇದಕ್ಕೆ ಕಾರಣ ಇದು ಹಾದು ಹೋಗುವ ರೊಮ್ಯಾಂಟಿಕ್ ತಾಣಗಳು, ಪ್ರಕೃತಿಯ ಸಹಜ ಸೌಂದರ್ಯದ ದಿಗ್ದರ್ಶನ, ವಿಶಾಲ ಹಾಗೂ ನಯನ ಮನೋಹರ ಭೂದೃಶ್ಯ.
ಹಿಂದೆ ಕಲ್ಲಿದ್ದಲು ಗಣಿ ಕಾರ್ಮಿಕರು ಪ್ರತಿನಿತ್ಯ ತಮ್ಮ ಕೆಲಸಗಳಿಗೆ ಹೋಗಲು ಹಾಗೂ ಮನೆಗೆ ಮರಳಲು ಈ ಉಗಿಬಂಡಿಯನ್ನು ಬಳಸುತ್ತಿದ್ದರು. ಒಂದು ಕಾಲದಲ್ಲಿ ಇದು ಸಿಚುವಾನ್ ಪ್ರಾಂತ್ಯದ ಶ್ರಮಿಕ ಜನಜೀವನದ ಅವಿಭಾಜ್ಯ ಅಂಗದಂತಾಗಿ ಹೋಗಿತ್ತು. ಈ ರೈಲಿನಲ್ಲಿ ಬಾಲ್ಯ, ತಾರುಣ್ಯ ಕಳೆದ ಹಲವು ಸಿಚುವಾನ್ ಪ್ರಾಂತ್ಯದ ನಾಗರೀಕರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಲು ಮತ್ತೆ ಉಗಿಬಂಡಿಯ ಪ್ರಯಾಣಕ್ಕೆ ಮುಗಿಬೀಳುತ್ತಾರೆ.
ಶಿಕ್ಸಿಯಿಂದ ಹ್ವಾಂಗ್ಕುಂಚಿಂಗ್ವರೆಗೆ ಚಲಿಸುವ ಈ ಸ್ಟೀಮ್ ಎಂಜಿನ್ ಗಂಟೆಗೆ 12 ಮೈಲಿ ಕ್ರಮಿಸುತ್ತದೆ. ಸಿಚುವಾನ್ ಪ್ರಾಂತ್ಯದ ಗ್ರಾಮೀಣ ಚೀನಿಯರು ಇಂದಿಗೂ ತಮ್ಮ ದೈನಂದಿನ ಓಡಾಟಕ್ಕೆ ಈ ಸ್ಟೀಂ ಎಂಜಿನ್ ಅನ್ನು ಅವಲಂಭಿಸಿದ್ದಾರೆ.
ಇನ್ನು ಬ್ರಿಟನ್ ಹಾಗೂ ಅಮೇರಿಕನ್ ಸೇರಿದಂತೆ ಹಲವು ಐರೋಪ್ಯ ರಾಷ್ಟ್ರಗಳ ಹವ್ಯಾಸಿ ಫೋಟೋಗ್ರಾಫರ್ಸ್ಗಳ ಸ್ವರ್ಗ, ಸಿಚುವಾನ್ ಪ್ರಾಂತ್ಯದ ರಮಣೀಯ ನಿಸರ್ಗ ಹಾಗೂ ಈ ಹಚ್ಚ ಹಳೆಯ ಲೋಕೋಮೋಟೀವ್ ಸ್ಟೀಮ್ ಎಂಜಿನ್. ಜಗತ್ತಿನ ಯಾವುದೇ ಭಾಗದಲ್ಲಿ ರೈಲಿನಲ್ಲಿ ಸಂಚರಿಸಿ ಫೋಟೋಗ್ರಾಫ್ ಕ್ಲಿಕ್ಕಿಸಿದರೂ ಈ ಸ್ಟೀಮ್ ಎಂಜಿನ್ನಲ್ಲಿ ಚಲಿಸುತ್ತಾ ಛಾಯಾಚಿತ್ರ ಕ್ಲಿಕ್ಕಿಸಿದಂತಾಗುವುದಿಲ್ಲ. ಈ ಕಲ್ಲಿದ್ದಲು ರೈಲಿನ ಪ್ರಯಾಣ, ಇದು ತೋರಿಸುವ ಪ್ರಾಕೃತಿಕ ಅನನ್ಯ ನೋಟ, ಇದರೊಳಗೆ ಕುಳಿತಾಗ ಮನಸಿಗುವ ಆಹ್ಲಾದ ಭಾವ ವರ್ಣನಾತೀತ ಅಂದಿದ್ದಾನೆ ಪ್ರಸಿದ್ಧ ಹವ್ಯಾಸಿ ಛಾಯಾಚಿತ್ರಕಾರ ಕೆವಿನ್ ಫ್ರೆಯರ್.
ನಮ್ಮ ಸಿಟಿ ಬಸ್ಗಳಂತೆ, ಗ್ರಾಮೀಣ ಪ್ರದೇಶದ ಖಾಸಗಿ ಬಸ್ಗಳಂತೆ ಈ ರೈಲಿನಲ್ಲೂ ಕೆಲವು ದಿನ ಜನಜಂಗಳಿ ತುಂಬಿ ತುಳುಕುತ್ತದೆ, ಜನ ರೈಲಿನೊಳಗೆ ಹಾಗೂ ಫುಟ್ಬೋರ್ಡ್ನಲ್ಲಿ ನೇತಾಡುತ್ತಾ, ರೈಲಿನ ಟಾಪ್ನಲ್ಲಿ ಕುಳಿತು ಪ್ರಯಾಣಿಸುತ್ತಾರೆ. 1959ರಿಂದ ಇಲ್ಲಿಯವರೆಗೂ ಈ ರೈಲು ಪ್ರತಿನಿತ್ಯ 7000 ಪ್ರಯಾಣಿಕರನ್ನು ಹೊತ್ತು ಸಂಚಿಸುತ್ತಿದೆ. ಸಿಚುವಾನ್ ಪ್ರಾಂತ್ಯದ ರೈತರು ತಾವು ಬೆಳೆದ ಫಸಲನ್ನು ಪಟ್ಟಣಕ್ಕೆ ಕೊಂಡೊಯ್ಯುವುದು ಇದೇ ರೈಲಿನಲ್ಲಿ. ಇದೇ ರೈಲಿನಲ್ಲಿ ಕೆಲವು ಚೀನೀ ಯುವಕ-ಯುವತಿಯರ ಮದುವೆ ದಿಬ್ಬಣ ಹೋಗಿದೆ. ಈ ಸ್ಟೀಮ್ ಎಂಜಿನ್ನಲ್ಲೇ ಕೆಲವರು ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದೇ ರೈಲಿನಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಲೇಶಾನ್ನ ಬುದ್ಧನ ನೋಡಲು ಬುದ್ಧನ ಭಕ್ತರು ಇದೇ ರೈಲಿನಲ್ಲಿ ತೆರಳಿದ್ದಾರೆ. ಈ ಉಗಿಬಂಡಿ ಸಿಚುವಾನ್ ಪ್ರಾಂತ್ಯದ ಆಡಳಿತ, ಪ್ರವಾಸೋದ್ಯಮ ಹಾಗೂ ಇಲ್ಲಿನ ಜನಜೀವನದ ಜೊತೆ ಹಾಸುಹೊಕ್ಕಾಗಿದೆ.
ಚೀನಾ ತನ್ನ ಗತದ ಚರಿತ್ರೆಯನ್ನು ಸಂರಕ್ಷಿಸುವ ವಿಚಾರದಲ್ಲಿ ಉಳಿದೆಲ್ಲಾ ರಾಷ್ಟ್ರಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಇಲ್ಲಿನ ರೈಲ್ವೇ ಇಲಾಖೆ ನಡೆದು ಹೆಜ್ಜೆ ಗುರುತನ್ನು ಸ್ಪಷ್ಟವಾಗಿ ಉಳಿಸುವ ಪ್ರಯತ್ನಗಳಾಗಿವೆ. ಅದರ ಕುರುಹಾಗಿ ಚೈನಾ ರೈಲ್ವೇ ಮ್ಯೂಸಿಯಂನಲ್ಲಿ, ಚೀನಾ ಇಂಡಸ್ಟ್ರಿಯಲ್ ಮ್ಯೂಸಿಯಂನಲ್ಲಿ, ಬೀಜಿಂಗ್ ರೈಲ್ವೇ ಬ್ಯೂರೋದ ಟ್ಯಾಂಗ್ಶಂಗ್ ಲೋಕೋಮೋಟೀವ್ ಡಿಪಾರ್ಟ್ಮೆಂಟ್, ಹೋಹ್ಹೋಟ್ ರೈಲ್ವೇ ಬ್ಯೂರೋದ ಜಿನಿಂಗ್ ಲೋಕೋಮೋಟೀವ್ ಹಾಗೂ ಜಿಟಾಂಗ್ ರೈಲ್ವೇನ ಡಬನ್ ಲೋಕೋಮೋಟೀವ್ ಡಿಪಾರ್ಟ್ಮೆಂಟ್ನಲ್ಲಿ, ಶೆನ್ಯಾಂಗ್ ರೈಲ್ವೇ ಮ್ಯೂಸಿಯಂಗಳಲ್ಲಿ ಹಳೆಯ ಸ್ಟೀಮ್ ಲೋಕೋಮೋಟೀವ್ ಎಂಜಿನ್ಗಳು ಹಾಗೂ ಉಳಿದ ಭೋಗಿಗಳನ್ನು ಸುರಕ್ಷಿತವಾಗಿ ಪ್ರದರ್ಶನಕ್ಕೆ ಇಡಲಾಗಿದೆ.
ತನ್ನ ನಾಗರೀಕತೆ ಬೆಳೆದು ಬಂದ ದಾರಿಯನ್ನು ಸಿಂಹಾವಲೋಕನ ಮಾಡುವಂತಹ ಅಪೂರ್ವ ಕೆಲಸವನ್ನು ಚೀನಾ ಸರ್ಕಾರ ಅಚ್ಚುಕಟ್ಟಾಗಿ ಮಾಡುತ್ತಿದೆ. ಇದಕ್ಕೆ ಜೀವಂತ ನಿದರ್ಶನ ಈಗಲೂ ಚಾಲನೆಯಲ್ಲಿರುವ ಜಿಯಾಂಗ್ ಸ್ಟೀಮ್ ಟ್ರೈನ್. ಹಳೆಯ ಉಗಿಬಂಡಿಯನ್ನು ಪ್ರಾವಾಸೋದ್ಯಮಕ್ಕೆ ಬಳಸಿಕೊಂಡು ಆರ್ಥಿಕವಾಗಿ ಲಾಭದಾಯಕವಾಗಿಸಿಕೊಂಡ ಚೀನಿಯರ ಬುದ್ದಿವಂತಿಕೆಯನ್ನು ಮುಕ್ತವಾಗಿ ಮೆಚ್ಚಿಕೊಳ್ಳಲೇಬೇಕು.
ಚೀನೀಯರು ಅದೆಷ್ಟೇ ಕೃತ್ರಿಮರು ವಂಚಕರಾದರೂ ಎಲ್ಲದ್ರಲ್ಲೂ ಮುಂದೆ.
ಅವರು ಎಲ್ಲ ಕ್ಷೇತ್ರಗಳಲ್ಲೂ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿದ್ದಾರೆ ಅಂತ ಗುರುತಿಸುವ ಹಲುಬುವ ನಾವು ಚೀನಿಯರು ತಮ್ಮ ಪ್ರಾಚೀನ ವ್ಯವಸ್ಥೆಯ ಸಂರಕ್ಷಣೆಯಲ್ಲಿ ತೋರಿಸ್ತಿರುವ ಆಸಕ್ತಿಯನ್ನು ಸಹ ಗುರುತಿಸಲೇಬೇಕು. ನಮ್ಮಲ್ಲೂ ಇಂತಹ ರಚನಾತ್ಮಕ, ಸೃಜನಾತ್ಮಕ ಹಾಗೂ ನಮ್ಮ ನಾಗರೀಕತೆಯ ಸಿಂಹಾವಲೋಕನದ ಪ್ರಾಮಾಣಿಕ ಪ್ರಯತ್ನಗಳಾಗಬೇಕಿದೆ.
-ವಿಭಾ (ವಿಶ್ವಾಸ್ ಭಾರದ್ವಾಜ್)
***
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel