ನಿನ್ನೆಯಷ್ಟೇ ಕೃಷಿ ಕ್ಷೇತ್ರಕ್ಕೆ ಗುಡ್ ನ್ಯೂಸ್ ನೀಡಿದ್ದ ಮೋದಿ ಅವರು ಇಂದು ಮತ್ತೊಂದು ಮಹತ್ವದ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಚಾಲನೆ ನೀಡಿದ್ದಾರೆ. ಪ್ರಾದೇಶಿಕ ಆರ್ಥಿಕತೆಗೆ ಉತ್ತೇಜನ ನೀಡುವ ಮಹತ್ವದ ಯೋಜನೆಯಾಗಿರುವ ಚೆನ್ನೈ-ಅಂಡಮಾನ್ ಸಬ್ಮರೈನ್ ಆಪ್ಟಿಕಲ್ ಫೈಬರ್ ಕೇಬಲ್ ಕನೆಕ್ಟಿವಿಟಿಗೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.
ಯೋಜನೆಗೆ ಚಾಲನೆ ನೀಡಿದ್ ಬಳಿಕ ಈ ಕುರಿತಾಗಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು “ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಅತ್ಯಂತ ಮಹತ್ವದ ಆಯಕಟ್ಟಿನ ಪ್ರದೇಶಗಳಾಗಿವೆ. ಅಲ್ಲಿಗೆ ಸಂಪರ್ಕ ಕಲ್ಪಿಸುವುದು ದೇಶದ ಆದ್ಯ ಕರ್ತವ್ಯವಾಗಿದೆ. ನಿಗದಿತ ಅವಧಿಯಲ್ಲಿ 2,300 ಕಿ.ಮೀ. ಉದ್ದದ ಕೇಬಲ್ ಅನ್ನು ಸಮುದ್ರದಡಿಯಲ್ಲಿ ಅಳವಡಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ” ಎಂದಿದ್ದಾರೆ. ಅಲ್ಲದೇ ಆಳ ಸಮುದ್ರ ಸಮೀಕ್ಷೆ, ಕೇಬಲ್ ಗುಣಮಟ್ಟ ಮತ್ತು ವಿಶೇಷ ನೌಕೆಗಳನ್ನು ಉಪಯೋಗಿ ಕೇಬಲ್ ಅಳವಡಿಸುವ ಕಷ್ಟಕರ ಕೆಲಸವನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಮುಂದವರೆದು ಈ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಪ್ರಧಾನಿಗಳು ಹೈ ಇಂಪ್ಯಾಕ್ಟ್ ಪ್ರಾಜೆಕ್ಟ್ಗಳು ಅಂಡಮಾನ್ ಮತ್ತು ನಿಕೋಬಾರ್ನ 12 ದ್ವೀಪಗಳಿಗೆ ವಿಸ್ತರಣೆಯಾಗುತ್ತವೆ. ಅಲ್ಲಿ ಅತ್ಯಂತ ದೊಡ್ಡ ಸಮಸ್ಯೆಯಾಗಿದ್ದ ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕ ಅಡಚಣೆಯನ್ನು ಇಂದು ನಿವಾರಿಸಲಾಗಿದೆ. ಇದರ ಹೊರತಾಗಿ ರಸ್ತೆ, ವಾಯು ಮತ್ತು ಜಲ ಸಾರಿಗೆ ಮೂಲಕ ಆ ದ್ವೀಪಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯವೂ ಶೀಘ್ರವೇ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ.
ಇನ್ನೂ ಈ ಆಪ್ಟಿಕಲ್ ಫೈಬರ್ ಕೇಬಲ್ ಪ್ರಾಜೆಕ್ಟ್ ಯೋಜನೆಯು ದೇಶದ ಬದ್ಧತೆಯ ಭಾಗವಾಗಿದ್ದು, ಆನ್ಲೈನ್ ಕ್ಲಾಸ್ಗಳಿರಬಹುದು, ಟೂರಿಸಂ, ಬ್ಯಾಂಕಿಂಗ್, ಶಾಪಿಂಗ್ ಅಥವಾ ಟೆಲಿಮೆಡಿಸಿನ್ ಸೇರಿ ಇತರೇ ಸೌಲಭ್ಯಗಳನ್ನು ಒಳಗೊಂಡಿದೆ. ಇದರಿಂದಾಗಿ ಅಂಡಮಾನ್ – ನಿಕೋಬಾರ್ನಲ್ಲಿರುವ ಸಾವಿರಾರು ಕುಟುಂಬಗಳಿಗೆ ಸಹಾಯವಾಗಲಿದೆ. ಅಂಡಮಾನ್ಗೆ ಹೋಗುವ ಪ್ರವಾಸಿಗಳಿಗೂ ಈ ಸೌಲಭ್ಯ ಸಿಗಲಿದ್ದು, ಮುಂಬರುವ ದಿನಗಳಲ್ಲಿ ಅಂಡಮಾನ್ ನಿಕೋಬಾರ್ ನಂ.1 ಪ್ರವಾಸಿ ತಾಣವಾಗಿ ಮಾರ್ಪಾಡಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.








