ಅಮರಾವತಿ: ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾದ ಹಿನ್ನೆಲೆಯಲ್ಲಿ ದೇವಾಲಯ ಶುದ್ಧೀಕರಣ ಕಾರ್ಯ ನಡೆಯಿತು. ತಿರುಮಲದ ದೇವಾಲಯದ ಸುತ್ತ ಅರ್ಚಕರು ಸಂಪ್ರೋಕ್ಷಣೆ ಮಾಡಿದರು. ಹಾಲು, ತುಪ್ಪ, ಮೊಸರು, ಗಂಜಲ, ಸಗಣಿ ಬಳಸಿ ದೇವಾಲಯ ಶುದ್ಧೀಕರಣ ಮಾಡಿದರು.
ಟಿಟಿಡಿ ಇಓ ಜೆ ಶ್ಯಾಮಲಾ ರಾವ್ ಈ ಕುರಿತು ಮಾಹಿತಿ ನೀಡಿದರು. ಶ್ರೀನಿವಾಸನ ದೇವಾಲಯದ ಶುದ್ಧೀಕರಣದ ಯಾಗ ನಡೆಯುತ್ತಿದೆ. ಶುದ್ದೀಕರಣ ಸಂದರ್ಭದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಪವಿತ್ರೋತ್ಸವ ಮುಗಿದ ನಂತರ ಇಂದು ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಬೆಳಗ್ಗೆ 6 ಗಂಟೆಯಿಂದ ದೇವಾಲಯ ಪವಿತ್ರೋತ್ಸವ, ಮಹಾಶಾಂತಿ ಯಾಗ ಆರಂಭವಾಯಿತು. ವಿವಿಧ ಪಂಡಿತರು, ವೇದಶಾಸ್ತ್ರ ವಿದ್ವಾಂಸರು ಶುದ್ಧೀಕರಣ ನಡೆಸಿದರು. ತಿರುಪತಿ ತಿರುಮಲದ ಪ್ರಧಾನ ಅರ್ಚಕರು, ಆಗಮ ಪಂಡಿತರಿಂದ ಪವಿತ್ರೋತ್ಸವ ನೆರವೇರಿತು. ದೇವಾಲಯದ ಸುತ್ತ ಸಂಪ್ರೋಕ್ಷಣೆ ಮಾಡಲಾಯಿತು. ಭಕ್ತರ ಮನಸ್ಸಿನಲ್ಲಿರುವ ಅಪವಿತ್ರತೆ ಹೋಗಲಾಡಿಸಲು ಟಿಟಿಡಿಯಿಂದ ಯಾಗ ಕೂಡ ನಡೆಯಿತು.
ಆವರಣದಲ್ಲಿ ವೇದ ಶಾಸ್ತ್ರ ಪಂಡಿತರು, ಆಗಮಿಕರಿಂದ ಮಹಾ ಶಾಂತಿ ಯಾಗ ಜರುಗಿತು. ಯಾಗದಲ್ಲಿ ನೂರಾರು ಆಗಮಿಕರು, ಅರ್ಚಕರು ಭಾಗಿಯಾಗಿದ್ದರು. ಶುದ್ದೀಕರಣ ಬಳಿಕ ಎಂದಿನಂತೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಹೋಮ ನೆರವೇರಿದ ನಂತರ ತುಪ್ಪ ಬಳಕೆ ಮಾಡಿದ್ದ ಸ್ಥಳದಲ್ಲಿ ಸಂಪ್ರೋಕ್ಷಣೆ ಸಿಂಪಡಣೆ ಮಾಡಲಾಯಿತು. ಅನ್ನ ಪ್ರಸಾದ, ಲಡ್ಡು ತಯಾರಿಕೆ ಸ್ಥಳ, ಗೋದಾಮು ಸೇರಿದಂತೆ ಎಲ್ಲೆಡೆ ಸಂಪ್ರೋಕ್ಷಣೆ ಮಾಡಲಾಯಿತು.








