ಬೆಂಗಳೂರು : ಬೆಂಗಳೂರಿನ ಪಾದರಾಯನಪುರದ ಗಲಭೆಕೋರನ್ನು ರಾಮನಗರ ಕಾರಾಗೃಹಕ್ಕೆ ಸ್ಥಳಾಂತರಿಸುವ ಮೂಲಕ ರಾಜ್ಯ ಸರ್ಕಾರ ಅಕ್ಷಮ್ಯ ಅಪರಾಧವೆಸಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾದರಾಯನಪುರ ಗಲಭೆ ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟದೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅನಿತಾ ಕುಮಾರಸ್ವಾಮಿ ಅವರು, ತಕ್ಷಣವೇ ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿರುವ ಪಾದರಾಯನಪುರ ಗಲಭೆಕೋರನ್ನು ಬೇರೆಡೆಗೆ ಸ್ಥಳಾಂತರಿಸಿ ರಾಮನಗರ ಜಿಲ್ಲೆಯ ಜನತೆಯ ಆತಂಕವನ್ನು ದೂರ ಮಾಡಬೇಕು. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮುಂದಾಗಬಹುದಾದ ಅನಾಹುತದ ಬಗ್ಗೆ ಸರ್ಕಾರಕ್ಕೆ ಮೊದಲೇ ಕಿವಿ ಹಿಂಡಿದ್ದರು. ಜಾಣಕಿವುಡು ಪ್ರದರ್ಶಿಸಿದ ರಾಜ್ಯಸರ್ಕಾರ ಕೊರೊನಾ ಸೋಂಕನ್ನು ಜಿಲ್ಲೆಗೆ ಹಂಚಿದ್ದು ಸರೀನಾ ಎಂದು ಪ್ರಶ್ನಿಸಿರುವ ಅವರು, ಇದರ ಹಿಂದೆ ಕಾಣದ ಕೈಗಳ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.
ಇನ್ನು ಡಿಸಿಎಂ ಅಶ್ವತ್ಥ್ ನಾರಾಯಣ ವಿರುದ್ಧವೂ ಕಿಡಿಕಾರಿರುವ ಅನಿತಾ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ,ಉಪಮುಖ್ಯಮಂತ್ರಿ ಹಾಗೂ ವೈದ್ಯರು ಆಗಿರುವ ಡಾಕ್ಟರ್ ಅಶ್ವಥ್ ನಾರಾಯಣ ಅವರು ಹಾರಿಕೆಯ ಹೇಳಿಕೆಗಳ ನೀಡುವುದು ಬಿಟ್ಟು ಜವಾಬ್ದಾರಿತನದಿಂದ ವರ್ತಿಸಲಿ. ವಾಸ್ತವ ಸ್ಥಿತಿಯನ್ನು ಅರಿತು ಪ್ರತಿಕ್ರಿಯಿಸಲಿ. ಜಿಲ್ಲೆಯ ಜನತೆಯೊಂದಿಗೆ ಚೆಲ್ಲಾಟ ಮಾಡುವುದನ್ನು ಬಿಡಲಿ ಎಂದಿದ್ದಾರೆ.
ಇನ್ನು ಸರ್ಕಾರದ ಬೇಜವಾಬ್ದಾರಿತನವನ್ನು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ತಕ್ಷಣ ರಾಮನಗರ ಮರ್ವಾಡಿ ಕೈದಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ, ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹರಡದಂತೆ ಅಗತ್ಯ ವೈದ್ಯಕೀಯ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಜಿಲ್ಲೆಯ ಜನತೆಯ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಹೋರಾಟ ಅನಿವಾರ್ಯ ಎಂದು ಅನಿತಾ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.







