ಮುಂಬಯಿ : ಪ್ರಸಕ್ತ ಸಾಲಿನ ಐಪಿಎಲ್ (IPL 2023)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಮೊದಲ ಪಂದ್ಯವಾಡಿದ ಅಜಿಂಕ್ಯ ರಹಾನೆ (Ajinkya Rahane) ವೇಗದ ಅರ್ಧಶತಕ ಸಿಡಿಸಿ ದಾಖಲೆ ಸೃಷ್ಟಿಸಿದ್ದಾರೆ.
ಕಳಪೆ ಬ್ಯಾಟಿಂಗ್ ನಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ರಹಾನೆ, ತಮ್ಮ ಬ್ಯಾಟ್ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ 19 ಎಸೆತಗಳಲ್ಲಿಯೇ ಅರ್ಧ ಶತಕ ಸಿಡಿಸುವ ಮೂಲಕ 2023ರ ಐಪಿಎಲ್ ಆವೃತ್ತಿಯಲ್ಲಿ ವೇಗದ ಅರ್ಧಶತಕ ಬಾರಿಸಿದ ಮೊದಲಿಗ ಎನಿಸಿಕೊಂಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ (Jos Buttler) 20 ಎಸೆತಗಳಲ್ಲಿ 50 ರನ್ (6 ಬೌಂಡರಿ, 3 ಭರ್ಜರಿ ಸಿಕ್ಸರ್) ಸಿಡಿಸಿ ಪ್ರಸಕ್ತ ಸಾಲಿನ ಐಪಿಎಲ್ ನ ವೇಗದ ಶತಕ ಸೃಷ್ಟಿಸಿದ್ದರು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ತಂಡದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಈ ವರ್ಷದ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ 2ನೇ ಆಟಗಾರ ಹಾಗೂ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದರು.
ಇದೀಗ ಅಜಿಂಕ್ಯ ರಹಾನೆ ಕೇವಲ 19 ಎಸೆತಗಳಲ್ಲೇ 50 ರನ್ ಸಿಡಿಸಿ ಸಾಧನೆ ಮಾಡಿದ್ದಾರೆ. ಇದರಲ್ಲಿ 6 ಬೌಂಡರಿ, 3 ಭರ್ಜರಿ ಸಿಕ್ಸರ್ ಸೇರಿವೆ. ಈ ಪಂದ್ಯದಲ್ಲಿ ರಹಾನೆ 27 ಎಸೆತಗಳಲ್ಲಿ 61 ರನ್ (7 ಬೌಂಡರಿ, 3 ಸಿಕ್ಸರ್) ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ.








