ಸಿರಿಬಾಗಿಲು ವೆಂಕಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಅಧ್ಯಯನ ಯೋಗ್ಯ ಕಾರ್ಯಕ್ರಮಗಳ ಜತೆ, ಕೊರೊನಾ ಯಕ್ಷ ಜಾಗೃತಿ ಮೂಲಕ ಜಾಗತಿಕ ಮಟ್ಟದಲ್ಲಿ ಕೊವಿಡ್ 19 ರ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅದರ ಜತೆ ಇಂದಿನ ವಿದ್ಯಾಮಾನಕ್ಕೆ ಸರಿಹೊಂದುವ ರೀತಿ ಅಂದಾಜು 100 ವರ್ಷಗಳ ಹಳೆಯ ಪ್ರಸಂಗ ಕೆರೋಡಿ ಸಬ್ಬರಾವ್ ವಿರಚಿತ ಪಲಾಂಡು ಚರಿತ್ರೆ ಯಕ್ಷಗಾನವನ್ನು ಸಾಮಾಜಿಕ ಜಾಲತಾಣ ದಲ್ಲಿ ( YouTube SV Vision) ಪ್ರಸಾರ ಪಡಿಸಿದೆ.
“ಪಲಾಂಡು ಚರಿತ್ರೆ” ಎಂಬ ವಿಶೇಷ ಅಸಾಮಾನ್ಯ ಪ್ರಸಂಗದ ಕುರಿತು:
(ಕಂದಮೂಲ ಗಳಿಗೂ, ಶಾಖಾಹಾರಿಗಳಿಗೆ) ಸಸ್ಯ ಮೂಲ ತರಕಾರಿ ಮತ್ತು ಹಣ್ಣುಗಳಿಗೂ ತಮ್ಮಲ್ಲಿ ಯಾರು ಶ್ರೇಷ್ಠರೆಂಬ ಕುರಿತು ಉಂಟಾದ ವಾದ-ವಿವಾದ- ಕಾದಾಟ ಕೊನೆಗೆ ತೀರ್ಮಾನಕ್ಕೆ ಶ್ರೀಕೃಷ್ಣನಲ್ಲಿ ಮೊರೆ ಇಡಲಾಗುತ್ತದೆ. ಇತ್ತಂಡದವರಿಗೂ ಮೂರು ದಿನಗಳ ಅವಧಿ ಕೊಟ್ಟು ಅಭಿವೃದ್ಧಿ ಪಥದಲ್ಲಿದ್ದ ಕಂದಮೂಲಗಳು ಶ್ರೇಷ್ಠವೆಂದು ಪ್ರತಿಯೊಂದರ ವೈಶಿಷ್ಟ್ಯ ತಿಳುಹಿ, ಭೂಮಿಯಲ್ಲಿ ಬೇರು ಬಿಟ್ಟು ಕಷ್ಟ ಸಹಿಷ್ಣು ಗಳಾಗಿ ಗಟ್ಟಿಯಾಗಿ ಪರಿಸ್ಥಿತಿಗೆ ಹೊಂದಿ ಧೃತಿಗೆಡದೆ ಬಾಳುವುದೇ ನಿಜವಾದ ಬದುಕು. ಕೃಷಿ ಸಂಬಂಧಿತ ಯಾವ ಫಲ ಕಂದಮೂಲಗಳನ್ನು ಮನುಷ್ಯರು ಶರೀರದ ರೋಗನಿರೋಧಕ- ಪೌಷ್ಟಿಕಾಂಶ ಕ್ಕಾಗಿ ಹೇಗೆ- ಯಾವಾಗ ಬಳಸಬೇಕು – ಯಾವುದನ್ನು ಬಳಸಬಾರದು ಎಂಬ ಪ್ರಮುಖ ಸಂದೇಶ ಸಾರುವುದು ಈ ಪ್ರಸಂಗದ ಧ್ವನಿ.
ಪಲಾಂಡು ಚರಿತ್ರೆ, ಕೇವಲ ಪೌರಾಣಿಕ ಅಥವಾ ಕಾಲ್ಪನಿಕ ಕಥೆಗಳಿವೆ ಸೀಮಿತವಾಗಿದ್ದ ಯಕ್ಷಗಾನದ ವಸ್ತು ವಲಯವನ್ನು ವಿಸ್ತರಿಸಿ, ಸಾಮಾಜಿಕ ಹಾಗು ಸಮಕಾಲೀನ ಸಮಸ್ಯೆಗಳನ್ನು ಯಕ್ಷಗಾನೀಯವಾಗಿ ನಿರೂಪಿಸುವ ಮಾರ್ಗವನ್ನು ತೆರೆದು ತೋರಿದ ಶ್ರೇಯಸ್ಸು ಅದಕ್ಕಿದೆ. ಅದರ ಮಾದರಿಯನ್ನು ಅನುಸರಿಸಿ ಯಕ್ಷಗಾನೀಯ ಕವಿಗಳು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಇಂತಹ ಕೃತಿಯನ್ನು ಈ ಕಾಲಕ್ಕೆ ತಕ್ಕಂತೆ ಪ್ರದರ್ಶಿಸಲು ಸಿರಿಬಾಗಿಲು ಪ್ರತಿಷ್ಠಾನವು ನೇತೃತ್ವ ವಹಿಸಿರುವುದು ಗಮನಿಸಬೇಕಾದ ಸಂಗತಿ.
ಕೊರೋನಾ ದಿಗ್ಬಂಧನದ ವೇಳೆಯಲ್ಲಿ ಯಕ್ಷಗಾನ ಪ್ರದರ್ಶನವಿಲ್ಲದೆ ನಿರುತ್ಸಾಹದಿಂದಿರುವ ಕಲಾವಿದರಿಗೆ
ಇಂತಹ ಪ್ರದರ್ಶನಗಳು ಅನುಕೂಲವಾಗಲಿದೆ. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಸಾರುವ ಇಂತಹ ಪ್ರಸಂಗಗಳು ಯಕ್ಷಗಾನ ಕಲಾಪ್ರೇಮಿಗಳು ಆಸ್ವಾದಿಸಲು-ಸಮಾಜ ಜಾಗೃತಿ ವಹಿಸಲು ಅನುಕೂಲವಾಗಲಿ, ಯಕ್ಷಗಾನ ಬೆಳಗಿ ಬರಲಿ ಎನ್ನುವುದು ಆಯೋಜಕರ ಅಂಬೋಣ.
“ಯಕ್ಷಗಾನ ಕಲೆಯನ್ನು ಸರ್ವಸ್ವವಾಗಿರಿಸುವ ಕಲಾವಿದರುಗಳಾದ ನಾವುಗಳು ಸಮಾಜಕ್ಕೆ ನಮ್ಮಿಂದ ಕಲೆಯ ಮೂಲಕವೇ ಏನಾದರೂ ಸಂದೇಶ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊಡಬೇಕೆಂಬುದು ನಮ್ಮ ಪ್ರಧಾನ ಉದ್ದೇಶ. ಈ ಹಿಂದೆ ಕೋವಿಡ್ 19 ರ ಬಗ್ಗೆ ಹಲವಾರು ಜಾಗೃತಿ ಯಕ್ಷಗಾನ , ಬೊಂಬೆಯಾಟ ನಡೆಸಿ ಜಾಗತಿಕ ಮಟ್ಟದಲ್ಲಿ ಜಾಗೃತಿ ಅಭಿಯಾನದಲ್ಲಿ ಪ್ರಧಾನ ಪಾತ್ರ ವಹಿಸಿದ್ದೇವೆ. ನೂರು ವರ್ಷಗಳ ಹಿಂದೆ ಕೆರೊಡಿ ಸುಬ್ಬರಾವ್ ರಚಿಸಿದ ಪಾಲಾಂಡು ಚರಿತ್ರೆ ಪ್ರಸಂಗದ ವಿಶೇಷತೆಯನ್ನು ಗಮನಿಸಿ, ಇಂದಿನ ಈ ಪರಿಸ್ಥಿತಿಗೆ ಹೊಂದುವಂತೆ ದಾಖಲಿಸಿ, ದೃಶ್ಯ ಮಾಧ್ಯಮದ ಮೂಲಕ ಪ್ರಸಾರ ಪಡಿಸುತ್ತಿದ್ದೇವೆ. ಯಕ್ಷಗಾನ ಕಲಾಪ್ರೇಮಿಗಳು ಇದನ್ನು ಆಸ್ವಾದಿಸಲಿ, ಆ ಮೂಲಕ ಯಕ್ಷಗಾನ ಕಲೆ ಬೆಳೆದು ಬರಲಿ ಇದು ನಮ್ಮ ಉದ್ದೇಶ” ಎಂದು ಸಿರಿಬಾಗಿಲು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ತಿಳಿಸಿದರು.
ಈ ಪಾಲಾಂಡು ಚರಿತ್ರೆಯ ಕವಿ ಸಾಹಿತಿ ಕೆರೋಡಿ ಸುಬ್ಬರಾವ್ ರವರು ಪತ್ರಿಕೋದ್ಯಮಿ -ನಾಟಕ-ಕಾವ್ಯ-ಯಕ್ಷಗಾನ- ಲಲಿತ ಪ್ರಬಂಧ- ಭಾಷಾಂತರ ಎಲ್ಲಾ ಪ್ರಾಕಾರಗಳಲ್ಲೂ ವಿಫುಲ ಸಾಹಿತ್ಯ ರಚಿಸಿದ, ನಿಜ ಜೀವನದಲ್ಲಿ ಪ್ರಯೋಗಶೀಲ ಕೃಷಿಕರಾಗಿದ್ದರು.
ಇನ್ನು ಈ ಪ್ರಸಂಗದ ಚಿತ್ರೀಕರಣಕ್ಕೆ ಪ್ರಾಯೋಜಕತ್ವ ನೀಡಿದವರು ಹೈದ್ರಾಬಾದ್ ನ ಕನ್ನಡ ನಾಟ್ಯ ರಂಗದವರು. ಈ ಕನ್ನಡ ನಾಟ್ಯ ರಂಗವು ಹೊರನಾಡಿನ ಪ್ರಮುಖ ಕನ್ನಡ ಸಂಘಗಳಲ್ಲೊಂದು. 52 ವರ್ಷಗಳ ತನ್ನ ಭವ್ಯ ಇತಿಹಾಸದಲ್ಲಿ 100 ಯಕ್ಷಗಾನ ಸೇರಿ, 350ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕನ್ನಡ- ಸಂಸ್ಕೃತಿಯ ಪರಂಪರೆಯನ್ನು ಜೀವಂತವಾಗಿಡಲು ಶ್ರಮಿಸುತ್ತಾ ಬಂದಿರುವ ಸಂಸ್ಥೆಯ ಸ್ಥಾಪಕರು ಕೆರೋಡಿ ಗುಂಡೂರಾಯರು( ಸುಬ್ಬರಾಯರ ಮೊಮ್ಮಗ). ಪ್ರಸ್ತುತ ಉದ್ಯಮಿ, ಕಲಾ ಪೋಷಕರಾದ ,ಮಾರಣಕಟ್ಟೆ ಕೃಷ್ಣಮೂರ್ತಿಯವರು ಅಧ್ಯಕ್ಷರಾಗಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದೊಂದಿಗೆ, ಆಸಕ್ತರಿಗೆ ತರಬೇತಿ ನಡೆಸಿ, ತೆಲಂಗಾಣದಲ್ಲಿ ಪ್ರಥಮ ಬಾರಿಗೆ ಎಂಬ ಯಕ್ಷ- ನಾಟ್ಯ -ರಂಗ ವೆಂಬ ತಂಡವನ್ನು ಕಟ್ಟಿ, ಕುಶ-ಲವ ಆಖ್ಯಾನವನ್ನು ಪ್ರದರ್ಶಿಸಿದೆ.
ಕನ್ನಡ ನಾಟ್ಯ ರಂಗದ ನಿರಂಜನ ರಾವ್ ಅವರ ಅಪೇಕ್ಷೆಯಂತೆ ,ರಂಗವೂ ಈ ಸಂದಿಗ್ಧ ಕಾಲಘಟ್ಟದಲ್ಲಿ ಕಲಾವಿದರಿಗೆ ಸಹಕಾರಿಯಾಗುವ ದೃಷ್ಟಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಈ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿ ಸಹಕರಿಸಿದೆ.
ಪಲಾಂಡು ಚರಿತ್ರೆಯಲ್ಲಿ ವಾಸುದೇವ ರಂಗಭಟ್ ಮಧೂರು -ಶ್ರೀಕೃಷ್ಣನಾಗಿ ,ರಾಧಾಕೃಷ್ಣ ನಾವಡ ಮಧೂರು- ಚೂತ ಫಲವಾಗಿ ,ಜಯಪ್ರಕಾಶ್ ಶೆಟ್ಟಿ ಪರ್ಮುದೆ- ಪಲಾಂಡುವಾಗಿ ,ಮವ್ವಾರು ಬಾಲಕೃಷ್ಣ ಮಣಿಯಾಣಿ, ಹರೀಶ ಶೆಟ್ಟಿ ಮಣ್ಣಾಪು , ಮಾಧವ ಪಾಟಾಳಿ, ಪ್ರಕಾಶ್ ನಾಯಕ್, ಬಾಲಕೃಷ್ಣ ಸೀತಾಂಗೋಳಿ ,ಶಿವರಾಜ ಪೆರ್ಲ, ಶಿವಾನಂದ ಪೆರ್ಲ, ಕಿಶನ್, ಉಪಾಸನಾ, ಸ್ವಸ್ತಿಕ್, ಶ್ರೀಗಿರಿ ಮೊದಲಾದವರು ಪಾತ್ರ ನಿರ್ವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ -ರಾಮಕೃಷ್ಣ ಮಯ್ಯ ಸಿರಿಬಾಗಿಲು, ತಲ್ಪಣಾಜೆ ವೆಂಕಟ್ರಮಣ ಭಟ್, ಚೆಂಡೆ- ಮದ್ದಳೆಯಲ್ಲಿ ಲಕ್ಷ್ಮೀನಾರಾಯಣ ರಾವ್ ಅಡೂರು, ಲಕ್ಷ್ಮೀಶ ಬೆಂಗ್ರೊಡಿ ಭಾಗವಹಿಸಿದರು. ಬ್ರಹ್ಮಶ್ರೀ ಗಣಾದಿರಾಜ ತಂತ್ರಿ ಕೊಲ್ಲಂಗಾನ ಇವರು ವೇಷಭೂಷಣಗಳನ್ನಿತ್ತು ಸಹಕಸಿದರು. ಉದಯ ಕಂಬಾರ್ ವರ್ಣಾ ಸ್ಟುಡಿಯೋ ನೀರ್ಚಾಲು, ಹಾಗೂ ಶ್ರೀವತ್ಸ ಕುಂಚಿನಡ್ಕ ಇವರು ಚಿತ್ರೀಕರಿಸಿದರು.ಕೊಲ್ಲಂಗಾನ ಶ್ರೀನಿಲಯದಲ್ಲಿ ಚಿತ್ರೀಕರಣ ನಡೆಸಲಾಯಿತು.
-ಮಾಹಿತಿ ಮತ್ತು ನಿರೂಪಣೆ:- ಅಂಬಿಕಾ ಸೀತೂರು ಹಾಗೂ ಸಿರಿಬಾಗಿಲು ರಾಮಕೃಷ್ಣ ಮಯ್ಯ