ಸುರೇಶ್ ರೈನಾ ಅವರು, ಕ್ರಿಸ್ ಗೇಲ್ ಮತ್ತೆ ನೆನಪಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು ಏಕೆ ಈ ಹೇಳಿಕೆ ನೀಡಿದ್ದಾರೆ ಎಂಬ ಚರ್ಚೆ ಶುರುವಾಗಿದ್ದು, ಉತ್ತರವೂ ಸಿಕ್ಕಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಕೈಲ್ ಮೇಯರ್ಸ್ ಅವರ ಆಟ ನೋಡುತ್ತಿದ್ದರೆ ಕ್ರಿಸ್ ಗೇಲ್ ನೆನಪಾಗುತ್ತಾರಂತೆ ಅವರಿಗೆ. ಇದೇ ಮೊದಲ ಬಾರಿಗೆ ಐಪಿಎಲ್ ಅಂಗಳಕ್ಕೆ ಕಾಲಿಟ್ಟಿರುವ ಕೈಲ್ ಮೇಯರ್ಸ್ ಅಬ್ಬರ ನೋಡುತ್ತಿದ್ದರೆ ಕ್ರಿಸ್ ಗೇಲ್ ಕಣ್ಮುಂದೆ ಬರುತ್ತಾರೆ. ಮೇಯರ್ಸ್ ಅಬ್ಬರ ಮೊದಲ ಓವರ್ನಿಂದಲೇ ಶುರುವಾಗುತ್ತಿದೆ. ಇದಕ್ಕೆ ಸಾಕ್ಷಿಯೇ ಮೊದಲೆರಡು ಪಂದ್ಯಗಳು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೂಲಕ ಐಪಿಎಲ್ಗೆ ಪಾದರ್ಪಣೆ ಮಾಡಿದ್ದ ಕೈಲ್ ಮೇಯರ್ಸ್, ಮೊದಲ ಪಂದ್ಯದಲ್ಲಿಯೇ 38 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 2 ಬೌಂಡರಿಗಳೊಂದಿಗೆ 73 ರನ್ ಸಿಡಿಸಿದ್ದರು. ಈ ಮೂಲಕ 2008 ರ ನಂತರ ಐಪಿಎಲ್ ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲಿಯೇ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ಕೈಲ್ ಮೇಯರ್ಸ್ ಪಾಲಾಗಿತ್ತು. ಸಿಎಸ್ಕೆ ವಿರುದ್ಧದ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ದಾಂಡಿಗ ಮತ್ತೊಮ್ಮೆ ಅಬ್ಬರಿಸಿದ್ದಾರೆ.
ಸಿಎಸ್ಕೆ ವಿರುದ್ಧ 22 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ 53 ರನ್ ಬಾರಿಸಿದ್ದಾರೆ. ಇದರೊಂದಿಗೆ ಚೊಚ್ಚಲ ಐಪಿಎಲ್ನ ಮೊದಲೆರಡು ಇನಿಂಗ್ಸ್ಗಳಲ್ಲಿ ಅರ್ಧಶತಕ ಬಾರಿಸಿದ ವಿಶೇಷ ದಾಖಲೆಯನ್ನು ಕೈಲ್ ಮೇಯರ್ಸ್ ಬರೆದಿದ್ದಾರೆ.








