ಬೀದರ್ : ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಇಂದು ಹೆಮ್ಮಾರಿ ವೈರಸ್ ಬೀದರ್ ಜಿಲ್ಲೆಯಲ್ಲಿ ಮತ್ತೊಂದು ಬಲಿ ಪಡೆದುಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 45ಕ್ಕೆ ಏರಿದೆ.
ಮೇ 22ರಂದು ಬೀದರ್ ನ ವಿದ್ಯಾನಗರ ಕಾಲೋನಿಯ ನೆಲಸಿರುವ 49 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕಿರೋದು ಪತ್ತೆಯಾಗಿತ್ತು. ಕೂಡಲೇ ಅವರನ್ನು ಬ್ರೀಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಸೋಂಕಿನಿಂದಾಗಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬ್ರೀಮ್ಸ್ ನ ಐಸೋಲೇಷನ್ ವಾರ್ಡಿನಲ್ಲಿ ಇಂದು ಮೃತಪಟ್ಟಿದ್ದಾರೆ.
ಇನ್ನು ಮೃತ ವ್ಯಕ್ತಿಯು ಕಿಡ್ನಿ ವೈಫಲ್ಯ ಹಾಗೂ ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು, ಆರೋಗ್ಯ ಇಲಾಖೆ ನಿಯಮದಂತೆ ಇಂದು ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಬ್ರೀಮ್ಸ್ ನಿರ್ದೇಶಕ ಡಾ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಂಗಳವಾರದ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 95ಕ್ಕೆ ಏರಿಕೆಯಾಗಿದೆ.








