ನವದೆಹಲಿ: ಕಪ್ಪು ಹಣ ನಿಗ್ರಹವೇ ಚುನಾವಣಾ ಬಾಂಡ್ ಉದ್ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಚುನಾವಣೆಯಲ್ಲಿ ಕಪ್ಪು ಹಣ ನಿಯಂತ್ರಿಸುವುದಕ್ಕಾಗಿ ಇದನ್ನು ಪರಿಚಯಿಸಲಾಯಿತು ಎಂದು ಹೇಳಿದ್ದಾರೆ. ಆದರೆ, ಚುನಾವಣಾ ಬಾಂಡ್ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಚುನಾವಣೆಯಲ್ಲಿ ಸೋಲುವ ಭಯದಿಂದ ಇವಿಎಂ ಮೇಲೆ ಗುಮಾನಿ ಮಾಡುತ್ತಿವೆ. ಈ ವಿಷಯದಲ್ಲಿ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತವಾದಾಗ ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಕಪ್ಪು ಹಣವೇ ದೊಡ್ಡ ಶಕ್ತಿ. ಈ ಕಪ್ಪು ಹಣದಿಂದ ಚುನಾವಣೆ ಮುಕ್ತ ಮಾಡುವುದು ಹೇಗೆ ಎಂಬ ವಿಷಯ ಬಂದಾಗ ಚುನಾವಣಾ ಬಾಂಡ್ ಚಿಂತನೆ ಬಂತು. ನಗದು ಹಣದ ವ್ಯವಹಾರಕ್ಕೆ ಅವಕಾಶ ನೀಡಬಾರದು ಎಂದು ಬಾಂಡ್ ವ್ಯವಸ್ಥೆ ಜಾರಿ ಮಾಡಲಾಯಿತು. ಯಾರು ಯಾರಿಗೆ ಹಣ ನೀಡಿದರು ಎಂದು ಗೊತ್ತಾದ್ರೆ ರಾಜಕೀಯ ಪಕ್ಷಗಳು ಸಮಸ್ಯೆ ಮಾಡಬಹುದು. ಅಥವಾ ಜನರು ಹಣ ಕೊಡಲು ಮುಂದೆ ಬಾರದಿರಬಹುದು. ಬಾಂಡ್ ನಿಂದ ಹಣ ಎಲ್ಲಿಂದ ಬಂತು ಲೆಕ್ಕ ಸಿಗುತ್ತದೆ. ಹೀಗಾಗಿ ಹೆಸರು ಬಹಿರಂಗ ಮಾಡಿಲ್ಲ ಅಷ್ಟೇ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ಬರೋಬ್ಬರಿ 3 ಸಾವಿರ ಕಂಪನಿಗಳು ಚುನಾವಣೆಗೆ ಹಣ ನೀಡಿವೆ. ಈ ಪೈಕಿ 26 ಕಂಪನಿಗಳ ವಿರುದ್ಧ ಇಡಿ ತನಿಖೆ ನಡೆಯುತ್ತಿದೆ. ಈ ಬಾಂಡ್ ನಲ್ಲಿ ಶೇ. 63ರಷ್ಟು ಹಣ ವಿರೋಧ ಪಕ್ಷಗಳಿಗೆ ಹೋಗಿವೆ. ಶೇ. 37ರಷ್ಟು ಮಾತ್ರ ಬಿಜೆಪಿಗೆ ಬಂದಿದೆ ಎಂದು ಹೇಳಿದ್ದಾರೆ.