ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ವಾಪಸ್ ಪಡೆಯಲ್ಲ : ಸೋಮಶೇಖರ್
ಬೆಳಗಾವಿ : ಕೇಂದ್ರ ಸರಕಾರದಂತೆ ರಾಜ್ಯ ಬಿಜೆಪಿ ಸರಕಾರವೂ ಕೂಡ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ರಾಜ್ಯದಲ್ಲಿ ರೈತ ಸಂಘಟನೆಗಳು ಒತ್ತಾಯಿಸುತ್ತಿವೆ. ಈ ಮಧ್ಯೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ವಾಪಸ್ ಪಡೆಯಲ್ಲ ಎಂದು ಎಂದು ಸಹಕಾರ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯಲ್ಲಿ ಎಪಿಎಂಸಿ ಕಾಯ್ದೆ ವಾಪಸ್ ಪಡೆಯಬೇಕೆಂಬ ಒತ್ತಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಸೋಮಶೇಖರ್, ಈ ಕಾಯ್ದೆಯಿಂದ ರೈತರಿಗೆ ಯಾವುದೇ ಅನಾನುಕೂಲ ಇಲ್ಲ. ರೈತರು ಎಲ್ಲಿ ಬೇಕಾದ್ರು ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡಲು ಈ ಕಾಯ್ದೆಯಲ್ಲಿ ಅವಕಾಶ ಇರುತ್ತೆ. ಇದರಿಂದ ರೈತನಿಗೆ ಅನುಕೂಲ ಆಗುತ್ತೆ ಎಂದು ಕಾಯ್ದೆಗಳ ಬಗ್ಗೆ ವಿವರಣೆ ನೀಡಿದರು.
ಎಪಿಎಂಸಿ ಕಾಯ್ದೆಗಳಿಂದ ರೈತರಿಗೆ ಅನುಕೂಲವಾಗುತ್ತದೆ. ಹೀಗಾಗಿ ಎಪಿಎಂಸಿ ಕಾಯ್ದೆ ವಾಪಸ್ ಪಡೆಯೊಲ್ಲ ಎಂದು ಸ್ಪಷ್ಟಪಡಿಸಿದ ಸೋಮಶೇಖರ್, ಎಪಿಎಂಸಿಗಳನ್ನ ಯಾವುದೇ ಕಾರಣಕ್ಕೂ ಮುಚ್ಚೋದಿಲ್ಲ ಎಂದರು.
ಇನ್ನು ಸರ್ಕಾರದ ವಿರುದ್ಧ ವಿಪಕ್ಷಗಳು ಪ್ರತಿಭಟನೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿರೋಧ ಪಕ್ಷದವರು ಇರೋದು ವಿರೋಧ ಮಾಡೋಕೆ ಎಂದು ಕುಟುಕಿದರು. ಅಲ್ಲದೇ ಕೇವಲ ವಿರೋಧ ಮಾಡೋದನ್ನ ಬಿಟ್ಟು ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಚರ್ಚೆ ಮಾಡಲಿ ಎಂದು ಸಲಹೆ ನೀಡಿದರು.