Araga jnanendra | ಶಾಲೆ ಕಾಂಪೌಂಡ್ ಒಳಗೆ ಹಿಜಾಬ್, ಕೇಸರಿ ಶಾಲು ಧರಿಸಬಾರದು
ಬೆಂಗಳೂರು : ಶಾಲೆ ಕಾಂಪೌಂಡ್ ಒಳಗೆ ಹಿಜಾಬ್ ಧರಿಸಬಾರದು, ಹಸಿರು ಶಾಲು, ಕೇಸರಿ ಶಾಲು ಧರಿಸಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಹಿಜಾಬ್ ಧರಿಸುವುದರ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಶಾಲೆ ಸಮವಸ್ತ್ರ ಕಡ್ಡಾಯ ಅಂತಾ ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ.
ವಿದ್ಯಾರ್ಥಿಗಳು ಕಲಿತು ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂಬ ಸಂಸ್ಕಾರ ಕಲಿಯಲು ಒಳ್ಳೆಯದಾಗುತ್ತದೆ. ಧರ್ಮ ಆಚರಣೆಗೆ ಪೂಜೆ ಪುನಸ್ಕಾರಕ್ಕೆ ಚರ್ಚ್, ಮಸೀದಿ, ದೇವಸ್ಥಾನಗಳಿವೆ. ಅಲ್ಲಿ ಏನು ಮಾಡಲೂ ನಾವು ಸ್ವತಂತ್ರರು ಎಂದು ತಿಳಿಸಿದರು.
ಶಾಲೆಗಳಲ್ಲಾದರೂ ಮಕ್ಕಳು ದೇಶದ ಐಕ್ಯತೆ ಬಗ್ಗೆ ಸಂಸ್ಕಾರ ಪಡೆಯದಿದ್ದರೆ ಹೇಗಾಗುತ್ತದೆ ಎಂದು ಪ್ರಶ್ನಿಸಿದ ಗೃಹ ಸಚಿವರು, ಎಲ್ಲರೂ ಕೂಡಾ ಯೋಚನೆ ಮಾಡಬೇಕು.
ಹಿಜಾಬ್ ಹಿಂದೆ ಇರುವ ಮತೀಯ ಸಂಘಟನೆಗಳ ಬಗ್ಗೆ ಗಮನ ಕೊಡಲು ಪೊಲೀಸರಿಗೆ ಹೇಳಿದ್ದೇನೆ. ರಾಷ್ಟ್ರ ಒಗ್ಗಟ್ಟಾಗಬೇಕು ಎಂಬುದಕ್ಕೆ ಅಡ್ಡಗಾಲಾಗುವವರನ್ನು ಸರಿ ಮಾಡುವ ಕೆಲಸ ನಾವು ಮಾಡಬೇಕಾಗುತ್ತದೆ.
ಯಾವುದೇ ಧರ್ಮದವರು ಅವರವರ ಧರ್ಮ ಆಚರಣೆ ಮಾಡಲು ಶಾಲೆಗೆ ಬರುವುದಲ್ಲ. ಎಲ್ಲರೂ ಸೇರಿ ಭಾರತ ಮಾತೆಯ ಮಕ್ಕಳು ಎಂದು ವ್ಯಾಸಂಗಕ್ಕೆ ಬರಬೇಕು.
ಶಾಲೆ ಕಾಂಪೌಂಡ್ ಒಳಗೆ ಹಿಜಾಬ್ ಧರಿಸಬಾರದು, ಹಸಿರು ಶಾಲು, ಕೇಸರಿ ಶಾಲು ಧರಿಸಬಾರದು . ಶಾಲಾ ಮ್ಯಾನೇಜ್ ಮೆಂಟ್ ಹೇಳುವ ರೀತಿ ನಡೆದುಕೊಳ್ಳಬೇಕು ಎಂದು ಹೇಳಿದರು.









