ಮಾಸ್ಕೋ: ರಷ್ಯಾ ಅಧ್ಯಕ್ಷ ಪುಟಿನ್ ಕಟ್ಟಾ ವಿರೋಧಿ ಅಲೆಕ್ಸಿ ನವಲ್ನಿ ಅವರು ಜೈಲಿನಲ್ಲಿಯೇ ಸಾವನ್ನಪ್ಪಿದ ನಂತರ ಕೋಲಾಹಲವೇ ಉಂಟಾಗಿದೆ.
ಅಲ್ಲದೇ, ನವಲ್ನಿಗೆ ಗೌರವ ಸಲ್ಲಿಸಲು ಬೀದಿಗಿಳಿದ ಸುಮಾರು 400 ಜನರನ್ನು ಬಂಧಿಸಲಾಗಿದೆ. ವಿವಿಧ ನಗರಗಳಲ್ಲಿ ನವಲ್ನಿಗೆ ಶ್ರದ್ಧಾಂಜಲಿ ಸಲ್ಲಿಸಲು ಜನರು ಬೀದಿಗಿಳಿದಿದ್ದರು. ಮೇಣದ ಬತ್ತಿ, ಬ್ಯಾನರ್, ಕರಪತ್ರಗಳನ್ನು ಹಿಡಿದುಕೊಂಡು ನವಲ್ನಿ ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿ ಪುಟಿನ್ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು.
ಹೀಗಾಗಿ ರಷ್ಯಾದಲ್ಲಿ ಪ್ರತಿಭಟನಾನಿರತರ ಅರೆಸ್ಟ್ ಮುಂದುವರೆದಿದೆ. 12ಕ್ಕೂ ಅಧಿಕ ನಗರಗಳಲ್ಲಿ ಪೊಲೀಸರು ಶನಿವಾರ ರಾತ್ರಿಯವರೆಗೆ 401 ಜನರನ್ನು ಬಂಧಿಸಿದ್ದಾರೆ. ರಷ್ಯಾದ ಎರಡನೇ ಅತಿದೊಡ್ಡ ನಗರವಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ 200 ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಅಲೆಕ್ಸಿ ನವಲ್ನಿ (47) ಅವರ ಹಠಾತ್ ಸಾವು ರಷ್ಯಾ ಜನರನ್ನು ಆಘಾತಕ್ಕೆ ದೂಡಿದೆ. ಅವರು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳಿಗೆ ಹೆಸರುವಾಸಿಯಾಗಿದ್ದರು. ವಿಷಪ್ರಾಸನದಿಂದ ಬದುಕುಳಿದ ನಂತರ ಜೈಲು ಶಿಕ್ಷೆಗೆ ಒಳಗಾಗಿದ್ದರು. ಆದರೆ, ಈಗ ಜೈಲಿನಲ್ಲಿಯೇ ಸಾವನ್ನಪ್ಪಿದ್ದು, ಹಲವಾರು ಅನುಮಾನಗಳು ಮೂಡುತ್ತಿವೆ.