ಹಾಸನ: ರಾಜ್ಯದಲ್ಲಿ ಶಾಲಾ-ಕಾಲೇಜುಗಳ್ನು ಆರಂಭಿಸಬೇಕೇ ಬೇಡವೇ ಎಂಬುದರ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ನಾನಂತೂ ಒಬ್ಬ ತಂದೆಯಾಗಿ ನನ್ನ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಆದರೆ ಸರ್ಕಾರದ ತೀರ್ಮಾನಕ್ಕೆ ಬದ್ಧ ಎನ್ನುವ ಮೂಲಕ ಬಿಜೆಪಿ ಶಾಸಕ ಪ್ರೀತಂಗೌಡ ದ್ವಂದ್ವದ ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೀತಂಗೌಡ, ನನಗೂ ಎರಡು ಮಕ್ಕಳಿದ್ದಾರೆ. ಒಬ್ಬ ಜವಾಬ್ದಾರಿಯುತ ತಂದೆಯಾಗಿ ನಾನು ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಆದರೆ, ಬಿಜೆಪಿ ಶಾಸಕನಾಗಿ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎನ್ನುವ ಮೂಲಕ ಇಬ್ಬಂದಿ ನಿಲುವು ವ್ಯಕ್ತಪಡಿಸಿದ್ದಾರೆ.
ಹಾಗಾದರೆ ತಂದೆಯಾಗಿ ಮಕ್ಕಳನ್ನು ಶಾಲೆಗೆ ಕಳಿಸಲ್ಲ ಎನ್ನುವ ಪ್ರೀತಂಗೌಡ, ರಾಜ್ಯದಲ್ಲಿ ಅವರದೇ ಬಿಜೆಪಿ ಸರ್ಕಾರ ಇರುವ ಕಾರಣಕ್ಕೆ, ಸರ್ಕಾರದ ತೀರ್ಮಾನಕ್ಕೆ ಬದ್ಧನಾಗುತ್ತೇನೆ ಎಂದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸರ್ಕಾರಕ್ಕೆ ಶಾಸಕನಾಗಿ ನನ್ನ ಸಲಹೆಗಳನ್ನು ನೀಡಿದ್ದೇನೆ. ಶಾಸಕನಾಗಿ ಸರ್ಕಾರ ಹೇಳುವುದನ್ನು ಕೇಳುತ್ತೇನೆ. ಆದರೆ, ಮನೆಗೆ ಹೋದ ಮೇಲೆ ಪೋಷಕನಾಗಿ, ತಂದೆಯಾಗಿ ನನ್ನ ನಿರ್ಧಾರ ತೆಗೆದುಕೊಳ್ಳುವೆ. ಮೊದಲು ಕುಟುಂಬ, ಆಮೇಲೆ ರಾಜಕಾರಣ. ಜೀವ ಇದ್ದರೆ ಜೀವನ, ಜೀವದಿಂದ ಎರಡೂ ನಡೆಯಬೇಕು ಎಂದು ಸಂಪೂರ್ಣವಾಗಿ ದ್ವಂದ್ವದ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.