ಕರ್ನಾಟಕ ರಾಜಕಾರಣದಲ್ಲಿ ಈಗ ವಾಗ್ದಾಳಿಗಳ ಸುರಿಮಳೆಯೇ ಶುರುವಾಗಿದೆ. ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಅತ್ಯಂತ ಕಟುವಾದ ಮತ್ತು ವ್ಯಂಗ್ಯಭರಿತ ದಾಳಿ ನಡೆಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಹೆಸರನ್ನೇ ಅಣಕಿಸಿರುವ ಅಶೋಕ್, ಅವರ ಹೆಸರು ಪ್ರಿಯಾಂಕ್ ಅಲ್ಲ ಅದು ಪ್ರಿಯಾಂಕಾ ಅಲ್ವಾ? ಎಂದು ಪ್ರಶ್ನಿಸುವ ಮೂಲಕ ರಾಜಕೀಯ ಜಿದ್ದಾಜಿದ್ದಿಗೆ ಹೊಸ ತಿರುವು ನೀಡಿದ್ದಾರೆ. ಸದಾ ಕಾಲ ಯಾವುದಾದರೊಂದು ವಿಷಯದಲ್ಲಿ ಕ್ಯಾತೆ ತೆಗೆಯುವ ಪ್ರಿಯಾಂಕ್ ಯಾವತ್ತೂ ಒಕೆ ಅಲ್ಲ, ಅವರು ಕೇವಲ ಕ್ಯಾತೆ ಸಚಿವ ಎಂದು ಲೇವಡಿ ಮಾಡಿದ್ದಾರೆ.
ಆರ್ ಎಸ್ ಎಸ್ ಪಥಸಂಚಲನಕ್ಕೆ ಅನುಮತಿ ಪಡೆಯಬೇಕು ಎಂಬ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಬೆಂಕಿ ಉಗುಳಿರುವ ಅಶೋಕ್, ನಿಮ್ಮ ಬಾಂಗ್ಲಾದೇಶದ ಬಂಧುಗಳು ಹಬ್ಬ ಹರಿದಿನಗಳನ್ನು ಆಚರಿಸುವಾಗ ಪೊಲೀಸರ ಅನುಮತಿ ಪಡೆಯುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ನುಸುಳುಕೋರರಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ಈ ಸರ್ಕಾರಕ್ಕಿದೆಯೇ? ಪ್ರಿಯಾಂಕ್ ಖರ್ಗೆ ಕಲಬುರಗಿ ಬಿಟ್ಟರೆ ಬೇರೆ ಎಲ್ಲಿದ್ದಾರೆ? ಆದರೆ ಆರ್ ಎಸ್ ಎಸ್ 175 ದೇಶಗಳಲ್ಲಿ ಹರಡಿಕೊಂಡಿದೆ ಎಂಬ ಸತ್ಯ ಅವರಿಗೆ ಗೊತ್ತಿರಲಿ ಎಂದು ಗುಡುಗಿದ್ದಾರೆ. ನಾವು ವಿದೇಶಿ ವಿವಿಗಳಲ್ಲಿ ಓದಿಲ್ಲ, ನಾವು ಜಾಲಹಳ್ಳಿ ಶಾಲೆಯಲ್ಲಿ ಓದಿದವರು. ನಮಗೆ ಪ್ರಿಯಾಂಕ್ ಖರ್ಗೆ ಅವರೇ ಪತ್ರ ಬರೆಯುವುದನ್ನು ಕಲಿಸಿಕೊಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಕೇವಲ ವಾಗ್ದಾಳಿಗೆ ಸೀಮಿತವಾಗದ ಆರ್ ಅಶೋಕ್, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಸದ ಟೆಂಡರ್ ನಲ್ಲಿ ನಡೆದಿದೆ ಎನ್ನಲಾದ 133 ಕೋಟಿ ರೂಪಾಯಿಗಳ ಬೃಹತ್ ಹಗರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಸ ಮುಕ್ತ ನಗರ ಮಾಡುವ ಹೆಸರಿನಲ್ಲಿ ಬಿಬಿಎಂಪಿಯಲ್ಲಿ ಲೂಟಿ ಹೊಡೆಯಲಾಗುತ್ತಿದೆ. ಮುನಿಯಪ್ಪ ಎಂಟರ್ ಪ್ರೈಸಸ್ ಎಂಬ ಕಂಪನಿಗೆ ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ನೀಡಲಾಗಿದೆ. 12.99 ಕೋಟಿ ರೂಪಾಯಿ ಭದ್ರತಾ ಠೇವಣಿ ಇಡದಿದ್ದರೂ, ಹಣಕಾಸು ಇಲಾಖೆಯ ಆಕ್ಷೇಪವಿದ್ದರೂ ಲೋ ಬಿಡ್ ಆಧಾರದ ಮೇಲೆ ಎಲ್ ಒ ಎ ನೀಡಲಾಗಿದೆ. ಕನಿಷ್ಠ ವಹಿವಾಟು ಇಲ್ಲದ ಕಂಪನಿಗೆ ಮಣೆ ಹಾಕಿರುವುದು 40 ಪರ್ಸೆಂಟ್ ಕಮಿಷನ್ ಪಡೆಯುವ ಉದ್ದೇಶದಿಂದಲೇ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಸದ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಈ ಅಕ್ರಮವು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಮುಖವಾಡವನ್ನು ಕಳಚಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ. ಒಂದು ಕಡೆ ಆರ್ ಎಸ್ ಎಸ್ ನಂತಹ ದೇಶಪ್ರೇಮಿ ಸಂಘಟನೆಯನ್ನು ಹತ್ತಿಕ್ಕುವ ಪ್ರಯತ್ನ, ಮತ್ತೊಂದೆಡೆ ಅಕ್ರಮ ನುಸುಳುಕೋರರ ರಕ್ಷಣೆ ಮತ್ತು ಬ್ರಹ್ಮಾಂಡ ಭ್ರಷ್ಟಾಚಾರ. ಇವೇ ಈ ಸರ್ಕಾರದ ಸಾಧನೆಗಳು ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಸಚಿವ ಖರ್ಗೆ ಮತ್ತು ಅಶೋಕ್ ನಡುವಿನ ವೈಯಕ್ತಿಕ ಮತ್ತು ರಾಜಕೀಯ ಸಮರವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿವೆ.







