ರಾಜ್ಯ ರಾಜಕಾರಣದ ಅಡಿಪಾಯವನ್ನೇ ಅಲುಗಾಡಿಸಿದ್ದ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಈಗ ಹೊಸ ಆಯಾಮ ಪಡೆದುಕೊಂಡಿದೆ. ಹೊಳೆನರಸೀಪುರದ ಮಾವಿನಕೆರೆ ಬೆಟ್ಟದಲ್ಲಿ ಶ್ರೀ ರಂಗನಾಥಸ್ವಾಮಿಯ ದರ್ಶನ ಪಡೆದ ಬೆನ್ನಲ್ಲೇ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ಸ್ಟಿಂಗ್ ಮಾಡಿದವರು ಯಾರು ಎಂಬುದು ಜಗಜ್ಜಾಹೀರಾಗಿದ್ದರೂ, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಡೀ ಪ್ರಕರಣವನ್ನು ಜೆಡಿಎಸ್ ವಿರುದ್ಧ ತಿರುಗಿಸಲು ವ್ಯವಸ್ಥಿತ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಪತ್ರಕರ್ತ ರಾಕೇಶ್ ಶೆಟ್ಟಿ ಮತ್ತು ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರ ಸಹಚರರೇ ಈ ಸ್ಟಿಂಗ್ ಆಪರೇಷನ್ ಹಿಂದೆ ಇದ್ದಾರೆ ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ. ಖುದ್ದು ಸಿದ್ದರಾಮಯ್ಯ ಮತ್ತು ಯತೀಂದ್ರ ಅವರೇ ಇವರ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ. ಹೀಗಿದ್ದರೂ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ಮೇಲೆ ಅನುಮಾನದ ಗೂಬೆ ಕೂರಿಸುವ ಕಣ್ಣೊರೆಸುವ ತಂತ್ರವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆ ನಾವು ಎದೆಗುಂದುವವರಲ್ಲ, ಅನ್ಯಾಯದ ವಿರುದ್ಧ ಹೋರಾಡುವ ತಾಕತ್ತು ನಮಗಿದೆ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
ಇನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡೆಯನ್ನು ತೀವ್ರವಾಗಿ ಖಂಡಿಸಿರುವ ಕುಮಾರಸ್ವಾಮಿ, ಜೆಡಿಎಸ್ ಸೋಶಿಯಲ್ ಮೀಡಿಯಾ ವಾರಿಯರ್ಸ್ ಮತ್ತು ಅವರ ಕುಟುಂಬಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಪಕ್ಷದ ವಾರ್ ರೂಮ್ ನಲ್ಲಿ ಕೆಲಸ ಮಾಡುವ ಯುವಕರ ಮನೆಗಳಿಗೆ ಸರ್ಚ್ ವಾರಂಟ್ ಕಳುಹಿಸುವ ಮೂಲಕ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲದೆ ಮತ್ತೇನು? ಎಂದು ಅವರು ಪ್ರಶ್ನಿಸಿದ್ದಾರೆ.
ಸ್ಟಿಂಗ್ ತನಿಖೆ ಶೇಕಡಾ 80 ರಷ್ಟು ಮುಗಿದಿದೆ ಎಂಬ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಎಚ್ ಡಿ ಕೆ, ಪಾಪ ಅವರು ತನಿಖೆಯನ್ನು ಅತಿ ವೇಗವಾಗಿ ಮುಗಿಸುತ್ತಿದ್ದಾರೆ. ಅದೇ ವೇಗದಲ್ಲಿ ಕೆಪಿಎಸ್ಸಿ ಹಗರಣದ ಶೇಕಡಾ 90 ರಷ್ಟು ಪುರಾವೆಗಳನ್ನು ಈಗಾಗಲೇ ಮುಚ್ಚಿ ಹಾಕಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಮತ್ತು ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದು ಕುಮಾರಸ್ವಾಮಿ ಅವರ ನೇರ ಆರೋಪವಾಗಿದೆ.








