ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಂಚುಗಳ ಸರಣಿಯೇ ಮುಂದುವರಿದಿದೆ. ಈ ಹಿಂದೆ ಹತ್ಯೆಯ ಸ್ಕೆಚ್, ಭಯೋತ್ಪಾದನಾ ದಾಳಿಯ ಬೆದರಿಕೆಗಳು ಕೇಳಿಬರುತ್ತಿದ್ದವು. ಆದರೆ ಈಗ ಎಲ್ಲವನ್ನೂ ಮೀರಿಸುವಂತೆ ಮೋದಿಯವರನ್ನು ಗುರಿಯಾಗಿಸಿಕೊಂಡು ಸ್ಮಶಾನದಲ್ಲಿ ವಾಮಾಚಾರ ನಡೆಸಿರುವ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ನಡೆದಿರುವ ಈ ಅಘೋರಿ ಕೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಇಡೀ ದೇಶವನ್ನೇ ಸ್ತಬ್ದಗೊಳಿಸಿದೆ.
ಪವಿತ್ರ ಸರಯೂ ನದಿ ದಂಡೆಯ ಮೇಲೆ, ನಿರ್ಜನವಾದ ಸ್ಮಶಾನದ ಕರಾಳ ಪರಿಸರದಲ್ಲಿ ಈ ವಾಮಾಚಾರ ನಡೆದಿದೆ. ದುಷ್ಕರ್ಮಿಗಳು ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಇಟ್ಟು ಅದರ ಸುತ್ತ ತೆಂಗಿನಕಾಯಿ, ನಿಂಬೆಹಣ್ಣು ಮತ್ತು ಕೇಸರಿ ಬಣ್ಣದ ಪುಡಿಗಳನ್ನು ಹಾಕಿ ಮಂತ್ರ ತಂತ್ರಗಳನ್ನು ಪಠಿಸಿರುವ ಕುರುಹುಗಳು ಪತ್ತೆಯಾಗಿವೆ. ಕ್ಷುದ್ರ ಶಕ್ತಿಗಳನ್ನು ಪ್ರಚೋದಿಸಿ ಮೋದಿಯವರಿಗೆ ಕೇಡು ಬಯಸುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಭದ್ರತಾ ಸಂಸ್ಥೆಗಳು ಮತ್ತು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಈಗಾಗಲೇ ಹತ್ಯೆಯ ಸಂಚು ರೂಪಿಸಿದ್ದ ಉಗ್ರರನ್ನು ಮುಂಬೈನಲ್ಲಿ ಸೆರೆಹಿಡಿಯಲಾಗಿತ್ತು. ಅದರ ಬೆನ್ನಲ್ಲೇ ಇಂತಹ ವಾಮಾಚಾರದ ಮೂಲಕ ಮಾನಸಿಕ ಮತ್ತು ಗೂಢ ಸಂಚು ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಉತ್ತರ ಪ್ರದೇಶ ಪೊಲೀಸರು ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಮೌ ಜಿಲ್ಲೆಯ ದೋಹ್ರಿಘಾಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ತನಿಖೆ ತೀವ್ರಗೊಂಡಿದೆ.
ಸೈಬರ್ ಕ್ರೈಂ ಪೊಲೀಸರು ಈ ವಿಡಿಯೋವನ್ನು ಮೊದಲು ಹರಿಬಿಟ್ಟವರು ಯಾರು ಮತ್ತು ಈ ಕೃತ್ಯದ ಹಿಂದೆ ಇರುವ ಮಾಂತ್ರಿಕರು ಅಥವಾ ಶಕ್ತಿಗಳು ಯಾರು ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಲಾಗುತ್ತಿದೆ. ಘೋಸಿ ಸರ್ಕಲ್ ಪೊಲೀಸ್ ಅಧಿಕಾರಿ ಸತ್ಯೇಂದ್ರ ಭೂಷಣ್ ತಿವಾರಿ ನೇತೃತ್ವದಲ್ಲಿ ವಿಶೇಷ ತಂಡಗಳು ಕಾರ್ಯಾಚರಣೆಗೆ ಇಳಿದಿವೆ. ಚುನಾವಣೆಗಳು ಹತ್ತಿರ ಬರುತ್ತಿರುವ ಹೊತ್ತಲ್ಲೇ ಮೋದಿಯವರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ವಿಲಕ್ಷಣ ಸಂಚುಗಳ ಹಿಂದೆ ದೊಡ್ಡ ಮಟ್ಟದ ರಾಜಕೀಯ ಅಥವಾ ವಿದ್ವಂಸಕ ಶಕ್ತಿಗಳ ಕೈವಾಡವಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ.








