ಕರ್ನಾಟಕದ ರಾಜಕೀಯ ಅಖಾಡದಲ್ಲಿ 2028ರ ವಿಧಾನಸಭಾ ಚುನಾವಣೆಯ ಕಾವು ಈಗಲೇ ಏರತೊಡಗಿದೆ. ರಾಜ್ಯದ ಜನಮನದ ತುಡಿತವನ್ನು ಅಳೆದಿರುವ ಬಾರ್ ಡೇಟಾ ಮತ್ತು ವೋಟ್ ಇಂಡಿಯಾ ಸಂಸ್ಥೆಯ ಇತ್ತೀಚಿನ ವರದಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಮಹಾ ಸಮೀಕ್ಷೆಯ ಪ್ರಕಾರ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ಎನ್ಡಿಎ ಮೈತ್ರಿಕೂಟ ರಾಜ್ಯದಲ್ಲಿ ದಿಗ್ವಿಜಯ ಸಾಧಿಸಲಿದೆ. ಒಟ್ಟು 224 ಕ್ಷೇತ್ರಗಳ ಪೈಕಿ ಬರೋಬ್ಬರಿ 149 ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಇತ್ತ ಆಡಳಿತರೂಢ ಕಾಂಗ್ರೆಸ್ ಕೇವಲ 75 ಸ್ಥಾನಗಳಿಗೆ ಕುಸಿಯುವ ಮೂಲಕ ಭಾರಿ ಮುಖಭಂಗ ಅನುಭವಿಸಲಿದೆ ಎಂದು ವರದಿ ಹೇಳಿದೆ.
ಈ ಚುನಾವಣಾ ಪ್ರೊಜೆಕ್ಷನ್ ಪ್ರಕಾರ, ಎನ್ಡಿಎ ಮೈತ್ರಿಕೂಟ ಶೇಕಡಾ 51 ರಷ್ಟು ಬೃಹತ್ ಮತ ಪ್ರಮಾಣವನ್ನು ಪಡೆಯಲಿದ್ದು, ಇದರಲ್ಲಿ ಬಿಜೆಪಿ ಶೇ. 37 ಮತ್ತು ಜೆಡಿಎಸ್ ಶೇ. 14 ರಷ್ಟು ಪಾಲು ಹೊಂದಿವೆ. ಕಿತ್ತೂರು ಕರ್ನಾಟಕದ ಲಿಂಗಾಯತ ಮತಬ್ಯಾಂಕ್ ಮತ್ತು ಕರಾವಳಿ-ಮಲೆನಾಡಿನ ಹಿಂದುತ್ವದ ಅಲೆ ಬಿಜೆಪಿಗೆ ವರದಾನವಾಗಲಿದೆ. ಕಾಂಗ್ರೆಸ್ ನಾಯಕರ ತುಳು ಭಾಷಾ ಮನ್ನಣೆಯ ಕಾರ್ಡ್ ಕರಾವಳಿಯಲ್ಲಿ ಕೆಲಸ ಮಾಡಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಇನ್ನು ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ನಾಯಕರ ಆಂತರಿಕ ಕಲಹ ಮತ್ತು ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಮತದಾರರನ್ನು ಅತೃಪ್ತಿಗೊಳಿಸಿದ್ದು, ಇದು ನೇರವಾಗಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ಬಲ ನೀಡಲಿದೆ.
ವಿಶೇಷವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್ನ ಬಣ ರಾಜಕೀಯದಿಂದಾಗಿ ಜೆಡಿಎಸ್ ಜಯಭೇರಿ ಬಾರಿಸಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೈತ್ರಿಕೂಟ 17ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಪಾರುಪತ್ಯ ಮೆರೆಯಲಿದೆ. ಕಲ್ಯಾಣ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಅಲ್ಲಿಯೂ ಎನ್ಡಿಎ ತೀವ್ರ ಪೈಪೋಟಿ ನೀಡಲಿದೆ ಎಂದು ಸಮೀಕ್ಷೆ ತಿಳಿಸಿದೆ. ಆಡಳಿತ ವಿರೋಧಿ ಅಲೆ ಮತ್ತು ಮೈತ್ರಿಕೂಟದ ಬಲಿಷ್ಠ ಮತ ಕ್ರೋಢೀಕರಣವು ಕಾಂಗ್ರೆಸ್ನ ಹಸ್ತವನ್ನು ದುರ್ಬಲಗೊಳಿಸಲಿದೆ ಎಂಬುದು ಈ ವರದಿಯ ಸಾರಾಂಶವಾಗಿದೆ.
ಕ್ಷೇತ್ರವಾರು ಲೆಕ್ಕಾಚಾರದಲ್ಲಿ ವರುಣಾ, ಕನಕಪುರ ಮತ್ತು ಹಾಸನದಂತಹ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ತೀವ್ರ ಜಿದ್ದಾಜಿದ್ದಿ ಏರ್ಪಡಲಿದ್ದು, ಮೈತ್ರಿಕೂಟದ ಸುನಾಮಿಗೆ ಕಾಂಗ್ರೆಸ್ನ ಹಲವು ಭದ್ರಕೋಟೆಗಳು ಧೂಳೀಪಟವಾಗಲಿವೆ. ಇದು ಕೇವಲ ಅಂಕಿ-ಅಂಶಗಳ ಆಟವಲ್ಲ, ಬದಲಾಗಿ ರಾಜ್ಯದ ಬದಲಾಗುತ್ತಿರುವ ರಾಜಕೀಯ ಗಾಳಿಯ ಮುನ್ಸೂಚನೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.








