ಕರ್ನಾಟಕದ ರಾಜಕೀಯ ಸಮರ ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಳಕ್ಕೆ ಬಂದು ನಿಂತಿದೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನಡುವಿನ ವಾಗ್ವಾದ ಈಗ ತಾರಕಕ್ಕೇರಿದ್ದು, ಪರಸ್ಪರ ಫಂಡ್ ವಾರ್ ಆರಂಭವಾಗಿದೆ. ಆರೆಸ್ಸೆಸ್ ಸಂಘಟನೆಯು ನೋಂದಾಯಿತ ಎಂಬ ಪದಕ್ಕೆ ಭಯಪಡುತ್ತದೆ ಎಂದು ಲೇವಡಿ ಮಾಡಿದ್ದ ಪ್ರಿಯಾಂಕ್ ಖರ್ಗೆ, ಸಂಘದ ಹಣಕಾಸಿನ ವ್ಯವಹಾರಗಳು ಮತ್ತು ಪಾರದರ್ಶಕತೆಯ ಬಗ್ಗೆ ಸಾಲು ಸಾಲು ಪ್ರಶ್ನೆಗಳನ್ನು ಎಸೆದಿದ್ದರು. ಈ ಬೆಂಕಿ ಉಗುಳುವ ಹೇಳಿಕೆಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆರ್ ಅಶೋಕ್, ಕಾಂಗ್ರೆಸ್ ನಾಯಕರ ಬಣ್ಣವನ್ನು ಬಯಲು ಮಾಡಿದ್ದಾರೆ.
ಸಂಘಕ್ಕೆ ಹಣ ನೀಡುವವರು ಯಾರು? ಆ ಹಣ ಎಲ್ಲಿಗೆ ಹೋಗುತ್ತದೆ? ಲೆಕ್ಕಪರಿಶೋಧನೆ ಮಾಡುವವರು ಯಾರು? ಎಂದು ಪ್ರಶ್ನಿಸಿದ್ದ ಪ್ರಿಯಾಂಕ್ ಖರ್ಗೆ, ಆರೆಸ್ಸೆಸ್ ತನ್ನ ಲೆಕ್ಕಪತ್ರಗಳನ್ನು ಸಾರ್ವಜನಿಕವಾಗಿ ಏಕೆ ಬಹಿರಂಗಪಡಿಸಬಾರದು ಎಂದು ಗುಡುಗಿದ್ದರು. ಇದಕ್ಕೆ ಪ್ರತಿಯಾಗಿ ಗುಡುಗಿರುವ ಆರ್ ಅಶೋಕ್, ಕಾಂಗ್ರೆಸ್ ಪಕ್ಷಕ್ಕೆ ಹಣ ಎಲ್ಲಿಂದ ಬರುತ್ತಿದೆ? ಪಾಕಿಸ್ತಾನದಿಂದ ಬರುತ್ತಿದೆಯೇ ಅಥವಾ ಅಮೆರಿಕದಿಂದ ಬರುತ್ತಿದೆಯೇ ಎಂದು ನೇರ ಪ್ರಶ್ನೆ ಹಾಕಿದ್ದಾರೆ. ನಾವು ನಿಮ್ಮ ತರಹ ಕಾಕ್ರೋಚ್ ಜನತಾ ಪಕ್ಷದ ಜೊತೆ ಸೇರಿ ಫಂಡ್ ಪಡೆಯುತ್ತಿಲ್ಲ. ಸಂಘದ ಸ್ವಯಂಸೇವಕರು ತಮ್ಮ ರಕ್ತ ಬೆವರಿನಿಂದ ಸಂಘವನ್ನು ಕಟ್ಟಿದ್ದಾರೆ, ಅವರೇ ಅದರ ಲೆಕ್ಕವನ್ನು ಬಲ್ಲರು ಎಂದು ಅಶೋಕ್ ತಿರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಸಚಿವ ಸ್ಥಾನದ ಅವಧಿಯ ಬಗ್ಗೆಯೂ ವ್ಯಂಗ್ಯವಾಡಿರುವ ಅಶೋಕ್, ನಿನ್ನ ಅಧಿಕಾರ ಇನ್ನು ಎಷ್ಟು ದಿನ ಇರಲಿದೆ? ಒಂದು ವರ್ಷದಲ್ಲಿ ನಿನ್ನ ಕುರ್ಚಿ ಅಲುಗಾಡಲಿದೆ. ಇಂತಹ ಸಂದರ್ಭದಲ್ಲಿ ಶತಮಾನದ ಇತಿಹಾಸವಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಮಾತನಾಡುವ ಅರ್ಹತೆ ನಿನಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಷ್ಟೊಂದು ತಾಕತ್ತಿದ್ದರೆ ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಅವರು ಮಾತನಾಡಲಿ, ನೀವೇಕೆ ಅಡ್ಡಬರುತ್ತೀರಿ ಎಂದು ಸವಾಲು ಹಾಕಿದ್ದಾರೆ. ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಮೌನ ವಹಿಸಿರುವುದನ್ನು ಅಶೋಕ್ ಪ್ರಶ್ನಿಸಿದ್ದಾರೆ.
ವಿಜಯದಶಮಿ ಸಂದರ್ಭದಲ್ಲಿ ನಡೆಯುವ ಪಥಸಂಚಲನವು ದೇಶಪ್ರೇಮದ ಸಂಕೇತ. ಇಂದಿರಾ ಗಾಂಧಿಯವರ ಕಾಲದಲ್ಲೂ ಸಿಗುತ್ತಿದ್ದ ಅನುಮತಿ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಸಿಗುತ್ತಿಲ್ಲ ಎಂದರೆ ಇದು ಹಿಂದೂ ವಿರೋಧಿ ನೀತಿಯಲ್ಲದೆ ಮತ್ತೇನು? ಸಂಘವು ದೇಶಕ್ಕಾಗಿ ಕಾರ್ಯನಿರ್ವಹಿಸುತ್ತಿದೆ, ಅದರ ಶಕ್ತಿಯನ್ನು ಕುಂದಿಸಲು ಸಚಿವ ಖರ್ಗೆ ಮಾಡುತ್ತಿರುವ ಪ್ರಯತ್ನಗಳು ಫಲ ನೀಡುವುದಿಲ್ಲ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಈ ವಾಗ್ದಾಳಿಯು ರಾಜ್ಯದಲ್ಲಿ ಸಂಘ ಮತ್ತು ಸರ್ಕಾರದ ನಡುವಿನ ಸಂಘರ್ಷವನ್ನು ಮತ್ತಷ್ಟು ಕಾವೇರಿಸಿದೆ.








