ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಸೋಲು ಕಂಡಿರುವ ಭಾರತ ತಂಡ ಈಗ ಎರಡನೇ ಟೆಸ್ಟ್ ಮೇಲೆ ಕಣ್ಣಿಟ್ಟಿದೆ. ಈ ಮಧ್ಯೆ ಆರ್. ಅಶ್ವಿನ್ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಶುಕ್ರವಾರ 2ನೇ ಟೆಸ್ಟ್ ಆರಂಭವಾಗಲಿದ್ದು, ಮೊದಲ ಟೆಸ್ಟ್ನಲ್ಲಿ 28 ರನ್ ಗಳಿಂದ ಸೋತ ನಂತರ, ಭಾರತ ಎರಡನೇ ಟೆಸ್ಟ್ ನಲ್ಲಿ ಗೆಲವು ಕಾಣಲು ಹವಣಿಸುತ್ತಿದೆ. ಈಗಾಗಲೇ ಎರಡನೇ ಟೆಸ್ಟ್ ನಿಂದ ಜಡೇಜಾ ಹಾಗೂ ರಾಹುಲ್ ಹೊರಗೆ ಹೋಗಿದ್ದಾರೆ. ಹೀಗಾಗಿ ರವಿಚಂದ್ರನ್ ಅಶ್ವಿನ್ ಅವರ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿಗಳಿವೆ. ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿರುವ ಹಾಗೂ ಮೊದಲ ಪಂದ್ಯದಲ್ಲಿ 6 ವಿಕೆಟ್ ಗಳನ್ನು ಪಡೆದಿದ್ದ ಅಶ್ವಿನ್ ಹಲವು ದಾಖಲೆಯ ಮುಂದೆ ನಿಂತಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಒಟ್ಟು 20 ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ 93 ವಿಕೆಟ್ ಪಡೆದಿದ್ದಾರೆ. ಈ ಮೂಲಕ 23 ಟೆಸ್ಟ್ಗಳಲ್ಲಿ 95 ವಿಕೆಟ್ ಗಳಿಸಿದ್ದ ಭಗವತ್ ಚಂದ್ರಶೇಖರ್ ದಾಖಲೆ ಮುರಿಯುವ ತವಕದಲ್ಲಿದ್ದಾರೆ. ಅಶ್ವಿನ್ 96 ಟೆಸ್ಟ್ಗಳಲ್ಲಿ 496 ವಿಕೆಟ್ಗಳನ್ನು ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ಗಳನ್ನು ಪಡೆದ ಎರಡನೇ ಭಾರತೀಯ ಹಾಗೂ ಒಂಬತ್ತನೇ ಬೌಲರ್ ಆಗಲು ಅವರಿಗೆ ವೈಜಾಗ್ ಟೆಸ್ಟ್ನಲ್ಲಿ ನಾಲ್ಕು ವಿಕೆಟ್ ಬೇಕಾಗಿದೆ.
ಅಶ್ವಿನ್ ಎರಡನೇ ಟೆಸ್ಟ್ನಲ್ಲಿ ಏಳು ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಮತ್ತು ವಿಶ್ವದ ಎರಡನೇ ಬೌಲರ್ ಆಗುತ್ತಾರೆ. ಇಂಗ್ಲೆಂಡ್ನ ಜೇಮ್ಸ್ ಆಂಡರ್ಸನ್ 139 ವಿಕೆಟ್ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಭಾರತದಲ್ಲಿ ಆಡಿರುವ 56 ಟೆಸ್ಟ್ಗಳಲ್ಲಿ 343 ವಿಕೆಟ್ಗಳನ್ನು ಪಡೆದಿದ್ದಾರೆ. ಭಾರತದ ನೆಲದಲ್ಲಿ ಆಡಿದ ಟೆಸ್ಟ್ಗಳಲ್ಲಿ 350 ವಿಕೆಟ್ ಪಡೆದ ಅನಿಲ್ ಕುಂಬ್ಳೆ ಅವರ ದಾಖಲೆ ಮುರಿಯಲು ಎಂಟು ವಿಕೆಟ್ಗಳ ಅಗತ್ಯವಿದೆ. 96 ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ 34 ಐದು ವಿಕೆಟ್ ಗೊಂಚಲು ಗಿಟ್ಟಿಸಿಕೊಂಡಿದ್ದಾರೆ. ಎರಡೂ ಇನ್ನಿಂಗ್ಸ್ಗಳಲ್ಲಿ ಐದು ವಿಕೆಟ್ಗಳನ್ನು ಗಳಿಸುವಲ್ಲಿ ಯಶಸ್ವಿಯಾದರೆ, ಅನಿಲ್ ಕುಂಬ್ಳೆ ದಾಖಲೆ ಮುರಿಯಲಿದ್ದಾರೆ.