ಬೆಂಗಳೂರು: ಪೊಲೀಸರೇ (Police) ರೌಡಿಗಳಂತೆ ಲಾಂಗ್ ಬೀಸಿ ವರ್ತಿಸಿರುವ ಘಟನೆಯೊಂದು ನಗರದಲ್ಲಿ ನಡೆದಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆಯ ಎಎಸ್ಐ ಶ್ರೀನಿವಾಸ್ ಎಂಬುವವರು ದಯಾನಂದ್, ಶಶಿಧರ್ ಎಂಬ ಯುವಕರ ಮೇಲೆ ರೌಡಿಗಳಂತೆ ಲಾಂಗ್ ನಿಂದ ಹಲ್ಲೆ ನಡೆಸಿದ್ದಾರೆ.
ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಎಎಸ್ ಐ ಶ್ರೀನಿವಾಸ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಎಎಸ್ ಐ ಶ್ರೀನಿವಾಸ್ ಅವರ ಅಣ್ಣನ ಮಗ ಆನಂದ್, ತೇಜಸ್ವಿನಿ ಬಾರ್ನಲ್ಲಿ ಮದ್ಯಪಾನ ಮಾಡಲು ತೆರಳಿದ್ದ. ಆ ವೇಳೆ ಬಾರ್ ನಲ್ಲಿ ದಯಾನಂದ್ ಮತ್ತು ಶಶಿಧರ್ ಎಂಬುವವರೊಂದಿಗೆ ಆನಂದ್ ಹಾಗೂ ಅವರ ಮಧ್ಯೆ ಸಣ್ಣ ಗಲಾಟೆಯಾಗಿದೆ. ಆಗ ಮಾತಿಗೆ ಮಾತು ಬೆಳೆದು ನಿನ್ನದು ಯಾವ ಏರಿಯಾ ಎಂದು ಬೈದಾಡಿಕೊಂಡಿದ್ದಾರೆ. ಆಗ ಆನಂದ್, ರೌಡಿಗಳನ್ನು ಕರೆದುಕೊಂಡು ತಮ್ಮ ಚಿಕ್ಕಪ್ಪನ ಮನೆಗೆ ತೆರಳಿದ್ದಾನೆ. ಅಲ್ಲಿ ಇಳಿಯುತ್ತಿದ್ದಂತೆ ಆನಂದ್, ಇವರಿಬ್ಬರೂ ಕಳ್ಳರು ಚಿಕ್ಕಪ್ಪ ಬೇಗ ಬನ್ನಿ ಎಂದು ಕೂಗಿದ್ದಾನೆ. ತಕ್ಷಣ ಕೈಯಲ್ಲಿ ಮಚ್ಚು, ಲಾಠಿ ಹಿಡಿದು ಓಡಿ ಬಂದ ಎಎಸ್ ಐ, ದಯಾನಂದ್ ಮತ್ತು ಶಶಿಧರ್ ಇಬ್ಬರನ್ನು ಹಿಡಿದು ಹಲ್ಲೆ ನಡೆಸಿದ್ದಾರೆ.
ಮಚ್ಚಲ್ಲಿ ಕೈ, ಕಾಲು, ಕುತ್ತಿಗೆ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಯುವಕರು ಕೆಳಗೆ ಬೀಳ್ತಿದ್ದಂತೆ ಲಾಠಿಯಿಂದ ಥಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ವಿಜಯನಗರ ಹೊಯ್ಸಳ ಸಿಬ್ಬಂದಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.








