ನವದೆಹಲಿ: ಭಾನುವಾರ ನಡೆಯಲಿರುವ ಏಷ್ಯಾಕಪ್ ಫೈನಲ್ ಪಂದ್ಯಾವಳಿಯ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾದ ವಿವಾದದ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ರೀಡಾಂಗಣದಲ್ಲಿ ಭಾರತದ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿದ ಘಟನೆಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಶಿ ತರೂರ್ ಅವರು ಸುದ್ದಿ ವಾಹಿನಿ ಜೊತೆ ಮಾತನಾಡಿ, “ಪಾಕಿಸ್ತಾನದ ಬಗ್ಗೆ ಬಲವಾದ ಭಾವನೆಗಳಿದ್ದಲ್ಲಿ ನಾವು ಅವರೊಂದಿಗೆ ಆಡಬಾರದಿತ್ತು ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಆದರೆ ನಾವು ಆಡಲು ಹೋಗಿದ್ದರೆ, ಕ್ರೀಡಾ ಮನೋಭಾವದಲ್ಲಿ ಆಡಬೇಕು ಮತ್ತು ಕೈಕುಲುಕಬೇಕಿತ್ತು” ಎಂದು ಹೇಳಿದ್ದಾರೆ.
ಕಾರ್ಗಿಲ್ ಯುದ್ಧದ ಉದಾಹರಣೆ ನೀಡಿದ ತರೂರ್
ಕ್ರೀಡೆ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿ ಇಡಬೇಕು ಎಂಬುದಕ್ಕೆ ತರೂರ್ ಕಾರ್ಗಿಲ್ ಯುದ್ಧದ ಸಂದರ್ಭವನ್ನು ಉದಾಹರಣೆಯಾಗಿ ನೀಡಿದ್ದಾರೆ. “1999ರಲ್ಲಿ ಕಾರ್ಗಿಲ್ ಯುದ್ಧ ನಡೆಯುತ್ತಿದ್ದಾಗ, ಸೈನಿಕರು ದೇಶಕ್ಕಾಗಿ ಹೋರಾಡಿ ಪ್ರಾಣ ತೆರುತ್ತಿದ್ದರು. ಅದೇ ಸಮಯದಲ್ಲಿ ನಾವು ಇಂಗ್ಲೆಂಡ್‌ನಲ್ಲಿ ಪಾಕಿಸ್ತಾನದ ವಿರುದ್ಧ ವಿಶ್ವಕಪ್ ಆಡಿದ್ದೆವು. ಆಗಲೂ ನಾವು ಅವರ ಕೈಕುಲುಕಿದ್ದೆವು. ಏಕೆಂದರೆ ಕ್ರೀಡಾಮನೋಭಾವವು ದೇಶಗಳ ನಡುವೆ ಅಥವಾ ಸೈನ್ಯಗಳ ನಡುವೆ ಇರುವ ಮನೋಭಾವಕ್ಕಿಂತ ಭಿನ್ನವಾಗಿದೆ” ಎಂದು ಅವರು ಪ್ರತಿಪಾದಿಸಿದರು.
ಉಭಯ ತಂಡಗಳಿಂದಲೂ ಕ್ರೀಡಾಮನೋಭಾವದ ಕೊರತೆ
ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳಲ್ಲಿ ಕ್ರೀಡಾಮನೋಭಾವದ ಕೊರತೆ ಎದ್ದು ಕಾಣುತ್ತಿದೆ ಎಂದು ತರೂರ್ ಟೀಕಿಸಿದ್ದಾರೆ. ಮೊದಲಿಗೆ ಅವಮಾನಕ್ಕೊಳಗಾದ ಪಾಕಿಸ್ತಾನ ತಂಡ, ಎರಡನೇ ಬಾರಿ ನಮ್ಮನ್ನು ಅವಮಾನಿಸಲು ಮುಂದಾಗಿದ್ದು, ಇದು ಎರಡೂ ಕಡೆಯಿಂದಲೂ ಕ್ರೀಡಾಮನೋಭಾವದ ಕೊರತೆ ಇದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದೇ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 21 ರಂದು ನಡೆದ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದ ವೇಳೆ ಪಾಕಿಸ್ತಾನದ ಕ್ರಿಕೆಟಿಗರಾದ ಸಾಹಿಬ್ಜಾದಾ ಫರ್ಹಾನ್ ಮತ್ತು ಹ್ಯಾರಿಸ್ ರೌಫ್ ಅವರ ವರ್ತನೆಯ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಐಸಿಸಿ ಮತ್ತು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್‌ಗೆ ದೂರು ಸಲ್ಲಿಸಿದೆ. ಇಬ್ಬರು ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಾರತ ತಂಡ ಆಗ್ರಹಿಸಿದೆ.








