ಮಂಡ್ಯ: ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಯ ಕೋಮಿನ ಯುವಕರ ಮೇಲೆ ಎಫ್ ಐಆರ್ ದಾಖಲಾಗಿದೆ.
ಬೆಳ್ಳೂರು (Belluru) ಪಟ್ಟಣದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬೆಳ್ಳೂರಿನ ಅಭಿಲಾಷ್ ಎಂಬಾತನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದರು. ಚೇರ್, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಅಭಿಲಾಷ್ ಕುಟುಂಬಸ್ಥರು ಆರೋಪಿಸಿದ್ದರು. ಈ ಕುರಿತು ಅಭಿಲಾಷ್ ತಂದೆ ದೂರು ನೀಡಿದ್ದರು.
ಹೀಗಾಗಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಹಲ್ಲೆ ನಡೆಸಿದ ನವೀದ್, ಸೂಫೀಯಾನ್, ಇಮ್ರಾನ್, ಸಮೀರ್, ಮುದಾಸೀರ್ ಸೇರಿ 11ಕ್ಕೂ ಹೆಚ್ಚು ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದೆ. ಬೈಕ್ ಟಚ್ ಮಾಡಿಕೊಂಡು ಓವರ್‌ಟೇಕ್ ಮಾಡಿದ್ದ ಇಬ್ಬರು ಮುಸ್ಲಿಂ ಯುವಕರನ್ನು ಪ್ರಶ್ನಿಸಿದ್ದಕ್ಕೆ, ಅಭಿಲಾಷ್ ಮೇಲೆ ಯುವಕರ ತಂಡ ದಾಳಿ ನಡೆಸಿತ್ತು. ಮನೆಗೆ ತೆರಳಿ ಹಲ್ಲೆ ನಡೆಸಿದ್ದರು ಎನ್ನಲಾಗಿತ್ತು. ಹೀಗಾಗಿ ದೊಡ್ಡ ಪ್ರತಿಭಟನೆ ನಡೆದಿತ್ತು. ಸದ್ಯ ಅಭಿಲಾಷ್ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.