ತಮಿಳುನಾಡು ರಾಜಕೀಯದಲ್ಲಿ ಇದೀಗ ಹೊಸ ವಿವಾದ ಒಂದು ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತೆಗೆದುಕೊಂಡ ಒಂದು ನಿರ್ಧಾರಕ್ಕೆ ರಾಜಕೀಯ ವಲಯದಲ್ಲೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ಟೀಕೆಗಳ ಸುರಿಮಳೆ ಕೇಳಿಬರುತ್ತಿದೆ.
ಸಿಎಂ ವಿಜಯ್ ಅವರ ಖಾಸಗಿ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ಅವರನ್ನು ಮುಖ್ಯಮಂತ್ರಿಯವರ OSD (Officer on Special Duty – ವಿಶೇಷ ಕರ್ತವ್ಯದ ಅಧಿಕಾರಿ) ಆಗಿ ನೇಮಕ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಹುದ್ದೆಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವೂ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೇ ವಿಚಾರ ಈಗ ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರ ಪ್ರಶ್ನೆಗೆ ಕಾರಣವಾಗಿದೆ.
ಒಬ್ಬ ಜ್ಯೋತಿಷಿಗೆ ಸರ್ಕಾರದಲ್ಲಿ ಅಧಿಕೃತ ಹುದ್ದೆ ನೀಡುವುದು ಸರಿಯೇ? ಎಂಬ ಪ್ರಶ್ನೆಯನ್ನು ಹಲವರು ಎತ್ತುತ್ತಿದ್ದಾರೆ. ಸರ್ಕಾರದ ಆಡಳಿತದಲ್ಲಿ ಅನುಭವ ಹೊಂದಿದ ಅಧಿಕಾರಿಗಳು, ತಜ್ಞರು ಇದ್ದಾಗ ಜ್ಯೋತಿಷಿಯನ್ನು ಪ್ರಮುಖ ಸ್ಥಾನಕ್ಕೆ ತರುವುದು ಯಾವ ಸಂದೇಶ ನೀಡುತ್ತದೆ ಎಂಬ ಚರ್ಚೆ ಜೋರಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವಿಜಯ್ ಅವರ ನಿರ್ಧಾರವನ್ನು ಟೀಕಿಸಿ, ಇದು ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ, ವಿಜಯ್ ಅಭಿಮಾನಿಗಳು ಮಾತ್ರ ಇದು ಮುಖ್ಯಮಂತ್ರಿಯವರ ವೈಯಕ್ತಿಕ ನಂಬಿಕೆ. ಅದನ್ನು ರಾಜಕೀಯವಾಗಿ ನೋಡಬಾರದು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆ, ರಿಕ್ಕಿ ರಾಧನ್ ಪಂಡಿತ್ ಸಾಮಾನ್ಯ ಜ್ಯೋತಿಷಿಯಲ್ಲ ಎನ್ನಲಾಗುತ್ತಿದೆ. ಅವರು ದಿವಂಗತ ಮಾಜಿ ಮುಖ್ಯಮಂತ್ರಿ J. ಜಯಲಲಿತಾ ಅವರಿಗೂ ಆಪ್ತ ಜ್ಯೋತಿಷಿಯಾಗಿದ್ದರು ಎಂಬ ಮಾಹಿತಿ ಇದೀಗ ಮತ್ತೆ ವೈರಲ್ ಆಗುತ್ತಿದೆ. ಜಯಲಲಿತಾ ಅವರ ರಾಜಕೀಯ ನಿರ್ಧಾರಗಳಲ್ಲೂ ರಿಕ್ಕಿ ರಾಧನ್ ಸಲಹೆ ನೀಡುತ್ತಿದ್ದರು ಎಂಬ ಮಾತುಗಳು ಆಗಾಗ ಕೇಳಿಬಂದಿದ್ದವು.
ಈ ನೇಮಕಾತಿ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ. ವಿಜಯ್ ಸರ್ಕಾರ ಈ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.








