ಬೆಂಗಳೂರು : ಜುಲೈನಿಂದ 10 ಕೆಜಿ ಅಕ್ಕಿಯ ಬದಲು 5 ಕೆಜಿ ಅಕ್ಕಿ ಹಾಗೂ ಒಬ್ಬರಿಗೆ ತಿಂಗಳಿಗೆ 170 ರೂ. ನೀಡುತ್ತೇವೆ ಎಂದು ಹೇಳಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಗಿ ಬಿದ್ದಿದೆ.
ಸದ್ಯ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ (Annabhagya) ಯೋಜನೆಯ ಮೊದಲ ತುತ್ತಿನಲ್ಲಿಯೇ ಕಲ್ಲು ಹಾಕಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ (Congress) ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜುಲೈನಿಂದಲೇ ಜಾರಿ ಮಾಡುವುದಾಗಿ ಭರವಸೆ ನೀಡಿತ್ತು. ಈಗ ಪೂರ್ಣ ಪ್ರಮಾಣದಲ್ಲಿ ಅಕ್ಕಿ ಸಿಗದ ಹಿನ್ನೆಲೆಯಲ್ಲಿ 10 ಕೆಜಿ ಅಕ್ಕಿ ಬದಲಿಗೆ 5 ಕೆಜಿ ಅಕ್ಕಿ ಕೊಟ್ಟು ಉಳಿದ 5 ಕೆಜಿ ಅಕ್ಕಿಯ ಬದಲಿಗೆ ಹಣ ನೀಡಲು ಮುಂದಾಗಿದೆ. ಕಾಂಗ್ರೆಸ್ ತನ್ನ ಮಾತನ್ನು ಮುರಿದು ಹಾಕಿ, ಜನರಿಗೆ ಮೋಸ ಮಾಡುತ್ತಿದೆ. ಹತ್ತು ಕೆಜಿ ಅಕ್ಕಿ ನೀಡುತ್ತೇನೆ ಎಂದು ಭರವಸೆ ನೀಡಿ, ಈಗ ಒಬ್ಬರಿಗೆ 170 ರೂ. ಹಾಕುವುದಾಗಿ ಹೇಳಿರುವುದು ಸರ್ಕಾರದ ವಂಚನೆಯ ಇನ್ನೊಂದು ಮುಖ ಎಂದು ವಾಗ್ದಾಳಿ ನಡೆಸಿದ್ದಾರೆ.








