ಬೆಂಗಳೂರು : ಕಳೆದ 35 ವರ್ಷಗಳ ಕಾಲ ರಾಜ್ಯದ ಅಥ್ಲೀಟ್ ಗಳಿಗೆ ತರಬೇತಿ ನೀಡಿದ್ದ ಪುರುಷೋತ್ತಮ್ ರೈ ಎದೆನೋವಿನಿಂದ ಮೃತಪಟ್ಟಿದ್ದಾರೆ. ಮೃತರಿಗೆ 79 ವರ್ಷ ವಯಸ್ಸಾಗಿತ್ತು.
ನಿನ್ನೆ ಸಂಜೆ ಪುರುಷೋತ್ತಮ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ದಕ್ಷಿಣ ಕನ್ನಡದ ಪುತ್ತೂರಿನ ಸೂತ್ರಬೆಟ್ಟ ಮನೆತನದವರಾದ ಪುರುಷೋತ್ತಮ್ ಅವರು ತಮ್ಮ ಜೀವಮಾನ ಸಾಧನೆಗಾಗಿ ಇಂದು ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಆದ್ರೆ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಒಂದು ದಿನ ಮೊದಲೇ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುವ ಕಡೇ ಹಂತದಲ್ಲಿ ರೈ ಮೃತಪಟ್ಟಿರುವುದು ಕುಟುಂಬ ಸದಸ್ಯರನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.