ಇರಾನ್ ಬೆಂಬಲಿತ ಗುಂಪುಗಳ ಸಂಘಟಿತ ದಾಳಿಯ ಪ್ರದರ್ಶನದಲ್ಲಿ ಹಿಜ್ಬುಲ್ಲಾ ಇಸ್ರೇಲಿ ಮಿಲಿಟರಿ ಸೈಟ್ ಗಳ ಮೇಲೆ ಸರಣಿ ದಾಳಿ ನಡೆಸಿದೆ. ಹೀಗಾಗಿ ಗಡಿಯಲ್ಲಿ ಉದ್ವಿಗ್ನದ ವಾತಾವರಣ ನಿರ್ಮಾಣವಾಗಿದ್ದು, ಯುದ್ಧ ಆರಂಭವಾಗುವುದು ಶತಸಿದ್ಧ ಎನ್ನಲಾಗುತ್ತಿದೆ.
ಒಂದು ಕ್ಷಿಪಣಿಯು ಇಸ್ರೇಲಿ ಪಡೆಗಳ ಗುಂಪನ್ನು ಹೊಡೆದಿದೆ ಎನ್ನಲಾಗಿದೆ. ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಮತ್ತು ಹಿಜ್ಬುಲ್ಲಾ ಕಮಾಂಡರ್ ಫುವಾದ್ ಶುಕ್ರ್ ಹತ್ಯೆಯ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಆದರೆ, ಈ ದಾಳಿಯಿಂದಾಗಿ ಇಸ್ರೇಲ್ ನಲ್ಲಿ ಯಾವುದೇ ಸಾವು- ನೋವು ಸಂಭವಿಸಿಲ್ಲ ಎನ್ನಲಾಗಿದೆ.
ಮಧ್ಯ ಮತ್ತು ದಕ್ಷಿಣ ಗಾಜಾ ಪಟ್ಟಿಯಲ್ಲಿ ಇಸ್ರೇಲಿ ವೈಮಾನಿಕ ದಾಳಿಗಳು 19 ಪ್ಯಾಲೆಸ್ಟೀನಿಯನ್ನರನ್ನು ಕೊಂದ ನಂತರ ಈ ದಾಳಿ ಸಂಭವಿಸಿದೆ. ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸ್ ನ್ನು ನಿರ್ಮೂಲನೆ ಮಾಡಿದಾಗಲೇ ಇದೆಲ್ಲ ಅಂತ್ಯವಾಗುವುದು ಅಂದಿದ್ದಾರೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.