ಅಫ್ಘಾನಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಅಬ್ಬರದ ದ್ವಿಶತಕ ಸಿಡಿಸಿ ಮಿಂಚಿದ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಬ್ಯಾಟಿಂಗ್‌ಗೆ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇವರ ಜೊತೆಗೆ ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರು ಕೂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸೋಲಿನ ಆತಂಕದ ನಡುವೆಯೂ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಗ್ಲೆನ್ ಮ್ಯಾಕ್ಸ್‌ವೆಲ್(201* ರನ್, 128 ಬಾಲ್, 21 ಬೌಂಡರಿ, 10 ಸಿಕ್ಸ್) ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದರು. ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಈ ಪ್ರದರ್ಶನದಿಂದ ಅಫ್ಘಾನಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ರೋಚಕ ಜಯ ಸಾಧಿಸಲು ಸಾಧ್ಯವಾಯಿತು.

ಅಫ್ಘಾನಿಸ್ತಾನ ನೀಡಿದ 292 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಆಸೀಸ್ 18.3 ಓವರ್‌ಗಳಲ್ಲಿ 91 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ಸಿ, ಅಫ್ಘಾನ್ ಆಟಗಾರರಷ್ಟೇ ಅಲ್ಲದೇ ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದರು. ಸ್ಪೋಟಕ ಬ್ಯಾಟಿಂಗ್‌ನಿಂದ ಬೌಂಡರಿ, ಸಿಕ್ಸರ್‌ಗಳ ಮೂಲಕ ರನ್ ಮಳೆಯನ್ನೇ ಹರಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಅವಿಸ್ಮರಣೀಯ ಆಟವಾಡಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಈ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೇ, ಮಾಜಿ ಕ್ರಿಕೆಟಿಗರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಮುಖವಾಗಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್, ಪಾಕಿಸ್ತಾನ ತಂಡದ ಮಾಜಿ ಆಟಗಾರ ವಾಸಿಂ ಅಕ್ರಮ್ ಅವರುಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದ ಆರಂಭಿಕ ಬ್ಯಾಟರ್ ಇಬ್ರಾಹಿಂ ಝದ್ರಾನ್(129*) ಅವರ ಶತಕ ಹಾಗೂ ಮ್ಯಾಕ್ಸ್‌ವೆಲ್(201*) ಅವರ ಭರ್ಜರಿ ದ್ವಿಶತಕದ ಬಗ್ಗೆ ಟ್ವೀಟ್ ಮೂಲಕ ಕೊಂಡಾಡಿದ್ದಾರೆ.
https://twitter.com/sachin_rt/status/1721935549504864621
“ಅಫ್ಘಾನಿಸ್ತಾನವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಲು ಝದ್ರಾನ್ ಅವರ ಅದ್ಭುತ ಇನ್ನಿಂಗ್ಸ್ ಕಾರಣವಾದರೆ. 2ನೇ ಇನ್ನಿಂಗ್ಸ್‌ನಲ್ಲಿ ಸಹ ಉತ್ತಮ ಆರಂಭ ಪಡೆದರು ಮತ್ತು 70 ಓವರ್‌ಗಳವರೆಗೆ ಉತ್ತಮ ಕ್ರಿಕೆಟ್ ಆಡಿದರು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಕೊನೆಯ 25 ಓವರ್‌ಗಳಲ್ಲಿ ಅಫ್ಘಾನಿಸ್ತಾನದ ಅದೃಷ್ಟವನ್ನು ಬದಲಾಯಿಸಿದರು. ಒತ್ತಡದ ನಡುವೆ ಮ್ಯಾಕ್ಸ್ ಅವರ ಶ್ರೇಷ್ಠ ಪ್ರದರ್ಶನ! ಇದು ನನ್ನ ಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ODI ಪ್ರದರ್ಶನ” ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
https://twitter.com/virendersehwag/status/1721932436408340569
“ರನ್-ಚೇಸ್‌ನಲ್ಲಿ 200, ಮ್ಯಾಕ್ಸ್‌ವೆಲ್ ಅವರ ಸಾರ್ವಕಾಲಿಕ ಶ್ರೇಷ್ಠ ಏಕದಿನ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ಮ್ಯಾಕ್ಸ್‌ವೆಲ್ ಅವರಿಗೆ ಕಮ್ಮಿನ್ಸ್ ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಇದು ದೀರ್ಘಕಾಲ ನೆನಪಿನಲ್ಲಿ ಉಳಿಯುವ ಇನ್ನಿಂಗ್ಸ್” ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಸಚಿನ್ ಹಾಗೂ ಸೆಹ್ವಾಗ್ ಅವರೊಂದಿಗೆ ವಾಸಿಂ ಅಕ್ರಮ್, ಬೆನ್ ಸ್ಟೋಕ್ಸ್, ಗೌತಮ್ ಗಂಭೀರ್, ಹರ್ಷ ಬೋಗ್ಲೆ ವಾಸಿಂ ಜಾಫರ್ ಸೇರಿದಂತೆ ಇನ್ನೂ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
AUS v AFG, Afghanistan, Glenn Maxwell, World Cup, ODI Cricket








