ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಜಾಗ ಹಸ್ತಾಂತರಿಸಿದ ಅಯೋಧ್ಯೆ ಜಿಲ್ಲಾಡಳಿತ
ಅಯೋಧ್ಯೆ, ಅಗಸ್ಟ್ 4: ರಾಮ ಮಂದಿರದ ಭೂಮಿ ಪೂಜೆ ಸಮಾರಂಭದ ಮೊದಲು ಅಯೋಧ್ಯೆ ಜಿಲ್ಲಾಧಿಕಾರಿ ಅನುಜ್ ಕುಮಾರ್ ಝಾ ಅವರು ಸುಪ್ರೀಂ ಕೋರ್ಟ್ ಆದೇಶಿಸಿದ ಐದು ಎಕರೆ ಬದಲಿ ಭೂಮಿಯನ್ನು ಸುನ್ನಿ ವಕ್ಛ್ ಮಂಡಳಿಗೆ ಹಸ್ತಾಂತರಿಸಿದರು.
ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ನ (ಐಐಸಿಎಫ್) ನಿಯೋಗ – ಫೈಜಾಬಾದ್‌ನ ಧನ್ನಿಪುರ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಮಂಡಳಿ ಇತ್ತೀಚೆಗೆ ರಚಿಸಿದ ಟ್ರಸ್ಟ್ ಅಯೋಧ್ಯೆ ಜಿಲ್ಲಾಧಿಕಾರಿಯನ್ನು ಶನಿವಾರ ಅವರ ನಿವಾಸದಲ್ಲಿ ಭೇಟಿಯಾಯಿತು.
ನಿಯೋಗದ ನೇತೃತ್ವವನ್ನು ಸುನ್ನಿ ವಕ್ಫ್ ಮಂಡಳಿಯ ಅಧ್ಯಕ್ಷ ಜುಫರ್ ಫಾರೂಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಯ್ಯದ್ ಮೊಹಮ್ಮದ್ ಶೋಯಿಬ್ ವಹಿಸಿದ್ದರು. ಆದಾಯ ದಾಖಲೆಯ ಪ್ರಮಾಣೀಕೃತ ನಕಲನ್ನು ನೀಡುವ ಮೂಲಕ ಜಿಲ್ಲಾ ಮ್ಯಾಜಿಸ್ಟ್ರೇಟ್ ಔಪಚಾರಿಕವಾಗಿ ಮಸೀದಿಗೆ ಭೂಮಿಯನ್ನು ಟ್ರಸ್ಟ್ ಸದಸ್ಯರಿಗೆ ಹಸ್ತಾಂತರಿಸಿದರು.
ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲು ಟ್ರಸ್ಟ್ ಸದಸ್ಯರು ಶೀಘ್ರದಲ್ಲೇ ಸಭೆ ಸೇರುತ್ತಾರೆ ಎಂದು ಶೋಯಿಬ್ ಹೇಳಿದರು.
2019 ರ ನವೆಂಬರ್ 9 ರಂದು ನೀಡಿದ ತೀರ್ಪಿನಲ್ಲಿ, ಅಯೋಧ್ಯೆಯಲ್ಲಿ ನೆಲಸಮಗೊಂಡ ಮಸೀದಿಯ ಬದಲಾಗಿ ಅಯೋಧ್ಯೆಯ ಪ್ರಮುಖ ಸ್ಥಳದಲ್ಲಿ ಐದು ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ಹಸ್ತಾಂತರಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ರಾಮ ಜನ್ಮಭೂಮಿಯ ಆವರಣದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಅಯೋಧ್ಯೆ ಜಿಲ್ಲೆಯ ಫೈಜಾಬಾದ್‌ನ ಸದರ್ ತಹಸಿಲ್ ನ ಧನ್ನಿಪುರ ಗ್ರಾಮದಲ್ಲಿ 2020 ರ ಫೆಬ್ರವರಿಯಲ್ಲಿ ಯುಪಿ ಸರ್ಕಾರ ಭೂಮಿ ಹಂಚಿಕೆ ಘೋಷಿಸಿತು. ಜುಲೈ 29 ರಂದು ಸುನ್ನಿ ವಕ್ಫ್ ಮಂಡಳಿಯು ಮಸೀದಿಯ ನಿರ್ಮಾಣವನ್ನು ಕೈಗೊಳ್ಳಲು ಟ್ರಸ್ಟ್‌ನ ಒಂಬತ್ತು ಸದಸ್ಯರ ಹೆಸರನ್ನು ಪ್ರಕಟಿಸಿತು.